

ಮೈಸೂರು: ಸಾಹಿತಿಗಳು ತಮ್ಮ ಬದುಕಿನ ಅನುಭವಗಳನ್ನು ಕೃತಿಗಳಲ್ಲಿ ದಾಖಲಿಸುವ ಪ್ರಯತ್ನ ಮಾಡಬೇಕು. ನಿಮ್ಮ ಅನುಭವಗಳೇ ನಿಮ್ಮ ಸಾಹಿತ್ಯದ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.
ಅಕ್ಷರ ನಾದ ಪಬ್ಲಿಕೇಷನ್-ಎಎಸ್‌ಟಿಆರ್, ಅಕ್ಷರನಾದ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಾವ್ಯ ಕಥಾ ಸಂಗಮ’ ಕಾರ್ಯಕ್ರಮದಲ್ಲಿ ವಿವಿಧ ಸಾಹಿತಿಗಳ 38 ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಅನುಭವ ಇಲ್ಲದೆ ಇದ್ದರೆ ಸಾಹಿತ್ಯ ರಚನೆ ಕಷ್ಟ, ಹಾಗಾಗಿ ಅನುಭವಕ್ಕೆ ಆದ್ಯತೆ ನೀಡಿ. ನಿಮ್ಮ ಅನುಭವಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಪ್ರಾರಂಭಿಸಿದರೆ ನಿಮ್ಮ ಮನೆಯೊ ಳಗಿನ ಸಮಸ್ಯೆಯೇ ಸಮಾಜದ ಸಮಸ್ಯೆಯೂ ಆಗಿರುತ್ತದೆ. ಅನುಭವದ ಆಧಾರದ ಮೇಲೆ ರಚಿಸುವ ಕೃತಿಗಳು ಹೆಚ್ಚು ಮೌಲ್ಯಯುತವಾಗಿರುತ್ತದೆ ಎಂದರು.
ನಿಮ್ಮ ಅನುಭವದ ಶಕ್ತಿಯನ್ನು ಬರವಣಿಗೆ ರೂಪದಲ್ಲಿ ಹಂಚಿಕೊಳ್ಳಿ. ಅಪರೂಪದ ಅನುಭವಗಳಾಗಿದ್ದರೆ ತುಂಬಾ ಉತ್ತಮ. ನಿಮಗೆ ದೊರೆತ ಅನುಭವಗಳು ಬಹುಶಃ ಇದುವರೆಗೆ ಯಾವುದೇ ಸಾಹಿತ್ಯ ಕೃತಿಗಳಲ್ಲಿ ಬಾರದೆ ಇದ್ದರೆ ನಿಮ್ಮದು ವಿಶಿಷ್ಟ ಸಾಹಿತ್ಯವಾಗುತ್ತದೆ. ಎಲ್ಲರಿಗೂ ಆಗುವ ಅನುಭವಗಳನ್ನೇ ನೀವು ಸಹ ದಾಖಲಿಸಿದರೆ ಅಂತಹ ಕೃತಿಗಳು ಹೆಚ್ಚು ಮಹತ್ವ ಪಡೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಈ ಹಿಂದೆ ನಮ್ಮ ಅಭಿಪ್ರಾಯಗಳನ್ನು ಕೇವಲ ಮಾಧ್ಯಮಗಳಲ್ಲಿ ಮಾತ್ರ ಹಂಚಿಕೊಳ್ಳಲು ಸಾಧ್ಯವಿತ್ತು. ಆದರೆ, ಮಾಧ್ಯಮಗಳಲ್ಲಿ ಎಲ್ಲ ಅಭಿಪ್ರಾಯಗಳು ಪ್ರಕಟವಾಗುತ್ತಿರಲಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಸಾಮಾಜಿಕ ಜಾಲತಾಣ ಪ್ರತಿಯೊಬ್ಬರನ್ನು ಲೇಖಕರು ಹಾಗೂ ಪತ್ರಕರ್ತರನ್ನಾಗಿ ರೂಪಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಚಿಸುವ ಸಾಹಿತ್ಯ ಬಹುಕಾಲ ಉಳಿಯುವುದಿಲ್ಲ. ಹಾಗಾಗಿ ಅವುಗಳನ್ನು ಪುಸ್ತಕವಾಗಿ ಹೊರ ತರುವ ಕಾರ್ಯ ಆಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಾಹಿತಿ ಡಾ.ಮಂಜುಳಾ ಪಾವಗಡ, ವಕೀಲ ಸಿದ್ದನಕೊಪ್ಪಲು ಕುಮಾರ್, ನಟ ಸೈಲ್ ಶಿವಕುಮಾರ್, ಸಾಹಿತಿಗಳಾದ ಡಾ.ಗುಣವಂತ ಮಂಜುನಾಥ್, ಪದ್ಮನಾಭ, ವೇದಿಕೆಯ ಅಧ್ಯಕ್ಷೆ ಡಾ. ಶ್ರುತಿ ಮಧುಸೂದನ್, ತೇಜಸ್ವಿನಿ ಸುನಿಲ್, ತಾರಾ, ಕಸಾಪ ಜಿಲ್ಲಾ ಉಪಾಧ್ಯಕ್ಷ ಟಿ.ಜಿ. ತ್ಯಾಗರಾಜು, ಪತ್ರಕರ್ತ ಫ್ರಾಂಕಿ ಲೋಬೊ, ಪ್ರಿಂಟ್ ಕ್ರಾಫ್ಟ್ ಸಲೂಷನ್‌ನ ಜಗದೀಶ ಹಾಗೂ ಇತರರು ಇದ್ದರು.