ಸಾಹಿತ್ಯದ ಬೀಡಾಗಿಸಿದ ದಿಗ್ಗಜರು: ಪ್ರೊ.ಶೈಲೇಂದ್ರ ಮೋಹನ್

22
Published on

ಮೈಸೂರು: ಪಂಪ, ರನ್ನ, ಪೊನ್ನರ ನಂತರದ ದಿನಗಳಲ್ಲಿ ಕುವೆಂಪು, ಗಿರೀಶ್ ಕಾರ್ನಾಡ್ ಸೇರಿದಂತೆ ಸಾಹಿತ್ಯ ಕ್ಷೇತ್ರದ ಹಲವು ದಿಗ್ಗಜರು ಕನ್ನಡಕ್ಕಾಗಿ ಕೆಲಸ ಮಾಡಿದ್ದಾರೆ. ಈ ಮೂಲಕ ಕರುನಾಡನ್ನು ಸಾಹಿತ್ಯದ ಬೀಡಾಗಿ ಪರಿವರ್ತಿಸಿದ್ದಾರೆ ಎಂದು ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಅಭಿಪ್ರಾಯಪಟ್ಟರು.


ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಭಾರತೀಯ ಭಾಷಾ ಸಂಸ್ಥಾನ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಇದೇ ರೀತಿ ಕನ್ನಡ ಬೆಳೆಸುವ ಕಾರ್ಯವನ್ನು ಇಂದಿನ ಯುವಜನತೆ ಮುಂದುವರಿಸಿಕೊಂಡು ಹೋಗಬೇಕು. ಅದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಭಾರತೀಯ ಭಾಷಾ ಸಂಸ್ಥಾನ ನೀಡಲಿದೆ ಎಂದರು.
ಸಿಐಐಎಲ್ ವತಿಯಿಂದ ಕನ್ನಡ ಸೇರಿದಂತೆ ಇತರ ಭಾಷೆಗಳ ಬೆಳವಣಿಗೆಗೆ ಯೋಜನೆ ಕೈಗೊಳ್ಳಲಾಗಿದೆ. ಇದಲ್ಲದೆ, ಕರ್ನಾಟಕದಲ್ಲಿ ಆದಿವಾಸಿಗಳಿಗೆ ಸೇರಿದ ಭಾಷೆ ಸೇರಿದಂತೆ ಕೆಲವು ಅಳಿವಿನಂಚಿನಲ್ಲಿರುವ ಭಾಷೆಗಳ ಉಳಿವಿಗಾಗಿ ಸಂಸ್ಥೆ ಕೆಲಸ ಮಾಡುತ್ತಿದೆ. ಸಂಶೋಧನೆ ಚಟುವಟಿಕೆಗಳೂ ನಡೆಯುತ್ತಿವೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಈಶ್ವರ ದೈತೋಟ ಮಾತನಾಡಿ, ನಾವು ವಿಶ್ವದ ಯಾವುದೇ ಮೂಲೆಗೆ ಹೋದರೂ ಅಲ್ಲಿನ ಭಾಷೆ ತಿಳಿಯದಿದ್ದರೆ ಕನ್ನಡದಲ್ಲಿ ಮಾತನಾಡಿದರೆ ಆ ಭಾಗದ ಜನತೆಗೆ ಅದು ಅರ್ಥವಾಗುತ್ತದೆ. ಕನ್ನಡಕ್ಕೆ ಆ ರೀತಿಯ ವಿಶೇಷತೆ ಇದೆ. ಇದನ್ನು ನಾನು ಸ್ವಂತ ಅನುಭವದಲ್ಲಿ ಕಂಡಿದ್ದೇನೆ ಎಂದರು.


ಇದೇ ವೇಳೆ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಿಸಲಾಯಿತು. ಜನಪದ ಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಬಿ. ಶಿವರಾಮಶೆಟ್ಟಿ, ಸಿಐಐಎಲ್ ಉಪನಿರ್ದೇಶಕ ಪ್ರೊ.ಸಿ.ವಿ. ಶಿವರಾಮ ಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net