

ವಿಜಯಪುರ: ಅಧಿಕಾರಿಗಳ ಬೇಜವಾಬ್ದಾರಿಯೋ….? ಗುತ್ತಿಗೆದಾರನ ದಿವ್ಯ ನಿರ್ಲಕ್ಷೃವೋ…? ಒಟ್ಟಿನಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಯುವ ಸಾಹಿತಿಯೋರ್ವ ಧಾರುಣವಾಗಿ ಸಾವಿಗೀಡಾಗಿದ್ದು, ಕುಟುಂಬ ಹಾಗೂ ಆಪ್ತವಲಯ ಆಘಾತ ಸಹಿತ ದುಃಖಕ್ಕೊಳಗಾಗಿದೆ.
ಹೌದು, ಜಿಲ್ಲೆಯ ಯುವ ಬರಹಗಾರ, ಶಿಕ್ಷಕ, ನಿರೂಪಣಕಾರ ರಾಜೇಂದ್ರಕುಮಾರ ಬಿರಾದಾರ (47) ಅಪಘಾತದಿಂದಾಗಿ ಅಸುನೀಗಿದ್ದಾರೆ. ಮೂಲತಃ ವಿಜಯಪುರ ತಾಲೂಕಿನ ಉಕುಮನಾಳ ಗ್ರಾಮದ ರಾಜೇಂದ್ರಕುಮಾರ ನಗರದ ಆಲಕುಂಟೆ ಬಡಾವಣೆಯಲ್ಲಿ ವಾಸವಾಗಿದ್ದರು. ಪತ್ನಿ ರಮ್ಯಾ, ಪುತ್ರ ವರುಣ ಹಾಗೂ ಪುತ್ರಿ ವಚನಾ ಇದ್ದಾರೆ.
ರಾಜೇಂದ್ರಕುಮಾರ ಬಿರಾದಾರ ಅವರು ಬುಧವಾರ ಸಂಜೆ 6ರ ಸುಮಾರಿಗೆ ರಾಮನಗರದಿಂದ ವಿಶ್ವೇಶ್ವರ ವೃತ್ತದ ಕಡೆ ಬೈಕ್ ಮೇಲೆ ಬರುತ್ತಿದ್ದರು. ರಾಮನಗರದ ಬಳಿಯ ರುಡ್‌ಸೆಟ್ ಸಂಸ್ಥೆಯ ಹತ್ತಿರ ಆಳವಾದ ತಗ್ಗು ತೋಡಿದ್ದು ಸುತ್ತ ಯಾವುದೇ ಬ್ಯಾರಿಕೇಡ್ ಅಳವಡಿಸಿರಲಿಲ್ಲ. ಇದನ್ನು ಗಮನಿಸದ ರಾಜೇಂದ್ರಕುಮಾರ ಬೈಕ್ ಸಮೇತ ಏಕಾಏಕಿ ತಗ್ಗಿಗೆ ಬಿದ್ದಿದ್ದಾರೆ. ತಗ್ಗಿನಲ್ಲಿದ್ದ ಕಲ್ಲು ಮತ್ತು ಕಬ್ಬಿಣದ ಸರಳು ತಲೆ ಮತ್ತು ಕುತ್ತಿಗೆ ಭಾಗಕ್ಕೆ ಬಡೆದು ತೀವ್ರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಬಂದು ರಾಜೇಂದ್ರಕುಮಾರನನ್ನು ಮೇಲಕ್ಕೆತ್ತಿ ಉಪಚರಿಸಿದ್ದರು. ರಕ್ತ ಸೋರಿಕೆಯಿಂದ ಅಸ್ವಸ್ಥನಾಗಿದ್ದ ರಾಜೇಂದ್ರಕುಮಾರನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗಿನ ಜಾವ ಚಿಕಿತ್ಸೆ ಫಲಿಸದೆ ರಾಜೇಂದ್ರಕುಮಾರ ಅಸುನೀಗಿದರೆಂದು ಅವರ ಆಪ್ತವಲಯ ಕಣ್ಣಿರಾಯಿತು.
ರಾಜೇಂದ್ರಕುಮಾರ ಸಾವಿಗೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ವಲ್ಲಭಬಾಯಿ ನಗರದಿಂದ ವಿಶ್ವೇಶ್ವರ ವೃತ್ತದವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿ ನಡೆದಿದೆ. ಕಳೆದ ಹಲವು ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ಎಲ್ಲೆಂದರಲ್ಲಿ ಅಗೆಯಲಾಗಿದೆ. ದಪ್ಪ ಕಡಿ ಹಾಕಿದ್ದು, ಕಬ್ಬಿಣದ ಸರಳು ಅಳವಡಿಸಿ ಪೂರಕ ಕಾಮಗಾರಿ ಕೈಗೊಳ್ಳಲಾಗಿದೆ. ರಾಮನಗರದ ಹತ್ತಿರದ ರುಡ್‌ಸೆಟ್ ಸಂಸ್ಥೆ ಬಳಿ ಆಳವಾದ ತಗ್ಗು ತೋಡಲಾಗಿದೆ. ರಸ್ತೆ ಆರಂಭ ಮತ್ತು ಅಂತ್ಯದಲ್ಲಿ ಯಾವುದೇ ಬ್ಯಾರಿಕೇಡ್ ಅಳವಡಿಸಿಲ್ಲ. ರೆಡ್ ರಿಬ್ಬನ್ ಇಲ್ಲ, ರೇಡಿಯಂ ಸಹ ಇಲ್ಲ. ಯಾವುದೇ ರೀತಿಯ ಮುಂಜಾಗೃತ ಫಲಕಗಳೂ ಇಲ್ಲ. ನಗರದೆಲ್ಲೆಡೆ ಇದೇ ರೀತಿ ಕಾಮಗಾರಿ ಕೈಗೊಳ್ಳುತ್ತಿದ್ದು, ಎಚ್ಚೆತ್ತುಕೊಳ್ಳದೇ ಹೋದರೆ ಇಂತ ಅದೆಷ್ಟು ಸಾವು ಕಣ್ಣಾರೆ ಕಾಣಬೇಕಾಗುತ್ತದೋ…? ಎಂದು ಸ್ಥಳೀಯರು ಆತಂಕ ಮಿಶ್ರಿತ ಆಕ್ರೋಶ ಹೊರಹಾಕಿದ್ದಾರೆ.
ರಾಜೇಂದ್ರಕುಮಾರ ಅವರ ಸಾವು ತೀವ್ರ ದುಃಖ ಹಾಗೂ ಆಘಾತವನ್ನುಂಟು ಮಾಡುವುದರ ಜೊತೆಗೆ ಅಚ್ಚರಿಯೂ ತಂದಿದೆ. ರಸ್ತೆ ಇನ್ನೊಂದು ತುದಿಯಲ್ಲಿದ್ದವರು ತದ್ವಿರುದ್ಧ ದಿಕ್ಕಿನಲ್ಲಿರುವ ತಗ್ಗಿನ ಸುತ್ತಲಿನ ಮಣ್ಣು ದಿಬ್ಬ ಏರಿ ಬಂದು ತಗ್ಗಿಗೆ ಬಿದ್ದಿದ್ದು ಹೇಗೆ? ಎಂಬುದು ತಿಳಿಯುತ್ತಿಲ್ಲ. ಒಂದೇ ಕಡೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು ಸಾಕಷ್ಟು ಮುಂಜಾಗೃತೆ ವಹಿಸಲಾಗಿದೆ. ಅದಾಗ್ಯೂ ಘಟನೆ ಸಂಭವಿಸಿದ್ದು ವೈಯಕ್ತಿಕವಾಗಿ ಆಘಾತವನ್ನುಂಟು ಮಾಡಿದ್ದು, ಮುಂಜಾಗೃತೆ ವಹಿಸಲು ಲೋಕೋಪಯೋಗಿ ಇಲಾಖೆ ಮತ್ತು ನಮ್ಮ ಮಹಾನಗರ ಪಾಲಿಕೆ ಸಿಬ್ಬಂದಿಗೆ ಸೂಚಿಸಲಾಗಿದೆ. ವಿಜಯಕುಮಾರ ಮೆಕ್ಕಳಕಿ, ಆಯುಕ್ತರು ಮಹಾನಗರ ಪಾಲಿಕೆ