

ರಾಯಚೂರು: ಹಿಂದೆ ಸಮಾಜದಲ್ಲಿನ ಬಿಕ್ಕಟ್ಟುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಾಹಿತ್ಯ ಚಳುವಳಿಗಳು ನಡೆದಿದ್ದು, ಕಳೆದ ಮೂರು ದಶಕಗಳಿಂದ ಸಾಹಿತ್ಯ ಚಳುವಳಿಗಳು ಮರೆಯಾಗಿವೆ. ಇಂದಿನ ಜಾಗತೀಕರಣ ಸೇರಿದಂತೆ ಮುಂತಾದ ಬಿಕ್ಕಟ್ಟುಗಳನ್ನು ಮೆಟ್ಟಿ ನಿಲ್ಲುವಂತಹ ಸಾಹಿತ್ಯ ಚಳುವಳಿಯನ್ನು ರೂಪಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ.ಅಮರೇಶ ನುಗಡೋಣಿ ಹೇಳಿದರು.
ಸ್ಥಳೀಯ ಐಎಂಎ ಸಭಾಂಗಣದಲ್ಲಿ ಬಸವ ಕೇಂದ್ರ, ಲೋಹಿಯಾ ಪ್ರತಿಷ್ಠಾನದಿಂದ ಭಾನುವಾರ ಏರ್ಪಡಿಸಿದ್ದ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರರ ಸಂಗಡಿಗರ ಸಮಿತಿ ಮತ್ತು ಇಂದ್ರಿಯ ನಿಗ್ರಹ ಮಾಡಿದರೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಹಿಂದೆ ವಚನ ಮತ್ತು ದಾಸ ಸಾಹಿತ್ಯ ಚಳುವಳಿಗಳ ಮೂಲಕ ವಚನಕಾರರು, ದಾಸರು ಸಮಾಜದಲ್ಲಿನ ನ್ಯೂನ್ಯತೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು. ಗುಂಪಾಗಿ ಒಂದು ತತ್ತ್ವ ಇಟ್ಟುಕೊಂಡು ಬಿಕ್ಕಟ್ಟನ್ನು ಎದುರಿಸುವ ಕೆಲಸವನ್ನು ಸಾಹಿತಿಗಳು ಮಾಡಿರುವುದನ್ನು ನಾವು ಕಾಣುತ್ತೇವೆ.
ವಚನಕಾರರ ನಂತರದಲ್ಲಿ ಲಿಖಿತ ಸಾಹಿತ್ಯ ಮುನ್ನೆಲೆಗೆ ಬರುವುದು ನಿಂತಿತ್ತು. ವಿಜಯನಗರ ಅರಸರ ಕಾಲದಲ್ಲಿ ಲಿಖಿತ ಸಾಹಿತ್ಯ ಪುನಃ ಮುನ್ನೆಲೆಗೆ ಬಂದಿದೆ. ಹಿಂದಿನ ಕಾಲದ ಈ ಭಾಗದ ಸಾಹಿತಿಗಳ ಸಾಹಿತ್ಯವನ್ನು ರಕ್ಷಿಸುವ ಕೆಲಸವಾಗಿಲ್ಲ. ಹೀಗಾಗಿ ಹಲವಾರು ಸಾಹಿತಿಗಳ ಸಾಹಿತ್ಯ ಮೂಲೆಗುಂಪಾಗುವಂತಾಗಿದೆ.
ಹೈದರಾಬಾದ್ ಕರ್ನಾಟಕದ ಸಾಹಿತ್ಯ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವನ್ನು ರಾಯಚೂರಿನ ಸಂಗಡಿಗರ ಸಮಿತಿ ಮಾಡಿತ್ತು. ಕೇವಲ ಸಾಹಿತಿಗಳು ಮಾತ್ರವಲ್ಲ ಸಂಗೀತ ಸೇರಿದಂತೆ ಇನ್ನಿತರ ಕ್ಷೇತ್ರದ ಸಾಧಕರು ಈ ಸಮಿತಿಯ ಮೂಲಕ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದರು ಎಂದು ಡಾ.ಅಮರೇಶ ನುಗಡೋಣಿ ಹೇಳಿದರು.
ಹಂಪಿ ಕನ್ನಡ ವಿವಿ ಕುಲಸಚಿವ ಪ್ರೊ.ವಿಜಯ ಪೂಣಚ್ಛ ತಂಬಂಡ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ರಾಯಚೂರು ಜಿಲ್ಲೆ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿ ಹೊಂದಿದ್ದರೂ ಪ್ರಗತಿಪರ ಚಿಂತನೆ ಇರುವ ಪ್ರದೇಶವಾಗಿದೆ. ಇಲ್ಲಿನ ಜನರಿಗೆ ಪ್ರಾತಿನಿಧ್ಯ ಸಿಗುವವರೆಗೆ ಹಿಂದುಳಿದ ಹಣೆಪಟ್ಟಿ ತೊಲಗಲು ಸಾಧ್ಯವಿಲ್ಲ ಎಂದರು.
ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಸಮಾಜ ರೂಪಿಸಿರುವುದನ್ನು ನಾವು ಪ್ರತಿರೋಧ ಒಡ್ಡದೆ ಸುಲಭವಾಗಿ ಒಪ್ಪಿಕೊಳ್ಳುತ್ತೇವೆ. ಶರಣರ ಧರ್ಮ ಸಂಸಾರಿಕ ಧರ್ಮವಾಗಿದೆ. ಮಠ, ಪೀಠಗಳಿಗೆ ಸ್ವಾಮೀಜಿಗಳನ್ನು ನೇಮಕ ಮಾಡುವಾಗ ಅದನ್ನು ಅರಿಯಬೇಕು.
ಇಂದ್ರೀಯ ನಿಗ್ರಹ ಆಧುನಿಕ ಕಾಲದಲ್ಲಿ ಸಾಧ್ಯವಿಲ್ಲ. 12ನೇ ಶತಮಾನದಲ್ಲಿ ಬೆರಳೆಣಿಕೆಯಷ್ಟು ಶರಣರನ್ನು ಬಿಟ್ಟರೆ ಉಳಿದೆಲ್ಲರು ಸಂಸಾರಿಕ ಜೀವನದಲ್ಲಿದ್ದವರಾಗಿದ್ದರು. ಹೀಗಾಗಿ ಮಠ, ಪೀಠಗಳಿಗೆ ಸಂಸಾರಿಕರನ್ನು ನೇಮಕ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಹಿಯಾ ಪ್ರಕಾಶನದ ಅಧ್ಯಕ್ಷ ಸಿ.ಚೆನ್ನಬಸವಣ್ಣ, ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಸಾಹಿತಿಗಳಾದ ಅಯ್ಯಪ್ಪಯ್ಯ ಹುಡಾ, ಡಾ.ಸರ್ವಮಂಗಳ ಸಕ್ರಿ, ಖ್ಯಾತ ಕ್ಲಾರಿಯೋನೆಟ್ ವಾದಕ ಪಂ.ನರಸಿಂಹಲು ವಡವಾಟಿ ಉಪಸ್ಥಿತರಿದ್ದರು.