ಸಾಹಿತ್ಯ ಭಾಷೆಯ ಶುದ್ಧತೆ ಕಳೆದುಕೊಳ್ಳುತ್ತಿದೆ: ಹಿರಿಯ ಸಾಹಿತಿ ಸಿಪಿಕೆ ಕಳವಳ

17
Published on

ಮೈಸೂರು: ಪ್ರಸ್ತುತ ಸಾಹಿತ್ಯದ ಭಾಷೆ ಶುದ್ಧತೆ ಕಳೆದುಕೊಳ್ಳುತ್ತಿದೆ. ಛಂದಸ್ಸಿನ ಬಳಕೆ ಕ್ಷೀಣಿಸುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ವಿಷಾಧಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶುಕ್ರವಾರ ನಗರದ ಇಂಜಿನಿಯರ್ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಆರ್.ರಂಗಸ್ವಾಮಿಶಾಂತ ರಚಿತ ಕಾವ್ಯ ಸುರಭಿ ಕವನ ಸಂಕಲನ ಬಿಡುಗಡೆಗೊಳಿಸಿ ವಾತನಾಡಿದರು.

ಕಾವ್ಯಗಳು ಹೃದಯವಂತಿಕೆ, ಮಾನವೀಯ ನೆಲೆಗಟ್ಟನ್ನು ಬೆಳೆಸಬೇಕು. ಆದರೆ, ಪ್ರಸ್ತುತ ಸಾಹಿತ್ಯದಲ್ಲಿ ಭಾಷೆ ಶುದ್ಧತೆ ಕಳೆದುಕೊಳ್ಳುತ್ತಿದೆ. ಛಂದಸ್ಸಿನ ಬಳಕೆ ಕ್ಷೀಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ರಂಗಸ್ವಾಮಿ ಶಾಂತ ಅವರ ಕವನ ಸಂಕಲನ ಭಾಷೆ ಶುದ್ಧತೆಯೊಂದಿಗೆ ಮಾನವೀಯ ನೆಲೆಗಟ್ಟು, ಹೃದಯವಂತಿಕೆ ಬೆಳಸಲಿದೆ ಎಂದು ಹೇಳಿದರು.

ಆಧುನಿಕ ಕನ್ನಡ ಸಾಹಿತ್ಯದ ನವೋದಯ ಕಾವ್ಯ ಪಂಥಕ್ಕೆ ಈ ಕವನ ಸಂಕಲನ ಸೇರಲಿದೆ. ಸರಳ ಸುಂದರ ಪದಗಳ ಮೂಲಕ ಅನುಭವದ ಸಮೃದ್ಧಿ ಇಲ್ಲಿನ ಕವನಗಳಲ್ಲಿದ್ದು, ಏನನ್ನು ಬಿಡದೆ ತಮ್ಮ ತೆಕ್ಕೆಗೆ ತೆಗೆದುಕೊಂಡು ಎಲ್ಲ ಪ್ರಕಾರಗಳನ್ನು ಲೇಖಕರು ಸ್ಪರ್ಶಿಸಿದ್ದಾರೆ ಎಂದು ವಿವರಿಸಿದರು.

ಕಾವ್ಯ ಸುರಭಿ ಕವನ ಸಂಕಲನದಲ್ಲಿ ಅನೇಕ ಬಗೆ ವೈಶಿಷ್ಟೃಗಳಿವೆ. ಬದುಕಿನ ಬಹುಮುಖ್ಯತೆಯನ್ನು ಹಿಡಿದಿದೆ. ಒಂದು ಕಡೆ ಭೂಮಿ, ಆಕಾಶ, ಅಧ್ಯಾತ್ಮ, ಲೌಕಿಕ ಹೀಗೆ ಬದುಕಿನ ವೈವಿಧ್ಯವನ್ನು ಕಾವ್ಯ ಉಣಬಡಿಸಲಿದೆ. ಜೀವ-ಸಾವುಗಳನ್ನು ಅಭಿವ್ಯಕ್ತಿಗೊಳಿಸಿದ್ದು, ಮನುಷ್ಯನಿಗೆ ಶೀಲವನ್ನು ಕಲಿಸಲಿದೆ ಎಂದು ಹೇಳಿದರು.

ಕೃತಿ ಕುರಿತು ಲೇಖಕ ಎ.ಎಸ್. ವಾಣಿ ಸುಬ್ಬಯ್ಯ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಭಾರತೀ ಪ್ರಕಾಶನದ ಶ್ರೀನಿವಾಸ, ಚುಟುಕು ಸಾಹಿತ್ಯ ಪರಿಷತ್ತಿನ ಡಾ.ಎಂ.ಜಿ.ಆರ್.ಅರಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಡಾ.ರತ್ನ ಹಾಲಪ್ಪಗೌಡ, ಹಿರಿಯ ಪತ್ರಕರ್ತ ಸೋಮಯ್ಯ ಮಲೆಯೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಮ.ನ.ಲತಾ ಮೋಹನ್, ಅಂಕಣಕಾರ ಡಿ.ಈರೇಶ್ ನಗರ್ಲೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net