ಸಾಹಿತ್ಯೇತರರು ಸಮ್ಮೇಳನಾಧ್ಯಕ್ಷರಾದರೆ ಹೋರಾಟ: ಸಾಹಿತಿ ಜಗದೀಶ್ ಕೊಪ್ಪ ಎಚ್ಚರಿಕೆ

Literary Jagdish Koppa press conference Mandya
Published on

ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯ ಲೋಕದವರೇ ಅಧ್ಯಕ್ಷರಾಗಬೇಕು. ಒಂದು ವೇಳೆ ಸಾಹಿತ್ಯೇತರರನ್ನು ಆಯ್ಕೆ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಾಹಿತಿ ಜಗದೀಶ್ ಕೊಪ್ಪ ಎಚ್ಚರಿಕೆ ನೀಡಿದರು.

ಬೇರೆ ಕ್ಷೇತ್ರದವರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸುವುದು ಸರಿಯಲ್ಲ. ಅವಶ್ಯಕತೆ ಇದ್ದರೆ ಅಂತಹವರನ್ನು ಸಮ್ಮೇಳದಲ್ಲೇ ಕರೆತಂದು ಗೌರವ ಸಮರ್ಪಣೆ ಮಾಡಲಿ. ಅದನ್ನು ಬಿಟ್ಟು ಸಮ್ಮೇಳನಾಧ್ಯಕ್ಷರಂತಹ ಹುದ್ದೆಗೆ ತರುವುದು ಸರಿಯಲ್ಲ. ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅವರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ಇವರಿಗೆ ತಕ್ಕಂತೆ ಜಿಲ್ಲಾಡಳಿತ ಮತ್ತು ರಾಜ್ಯಸರ್ಕಾರ ನಡೆದುಕೊಳ್ಳುತ್ತಿದೆ. ಇದಕ್ಕೆ ನಮ್ಮ ಪ್ರತಿರೋಧ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೂರು ದಿನದ ಜಾತ್ರೆಗೆ 5 ಕೋಟಿ ರೂ ವೆಚ್ಚದಲ್ಲಿ 50 ಎಕರೆ ಜಾಗದಲ್ಲಿ ವೇದಿಕೆ ನಿರ್ಮಾಣ ಮಾಡುತ್ತಾರೆ. ಇಂತಹ ಜಾತ್ರೆ ನಮಗೆ ಬೇಕಿಲ್ಲ. ಕನ್ನಡ ಸಾಹಿತ್ಯವನ್ನು ಬೆಳೆಸುವ ಸಮ್ಮೇಳನ ಆಗಬೇಕೆ ಹೊರತು, ಜಾತ್ರೆಯಲ್ಲ. ಜಾತ್ರೆಯನ್ನೇ ಮಾಡಬೇಕಿದ್ದರೆ ಮಾಡಿಕೊಳ್ಳಿ. ಆದರೆ ಸಮ್ಮೇಳವನ್ನು ಹಿಂದಿನ ಪರಂಪರೆ, ಪದ್ಧತಿಯನುಸಾರವೇ ಮಾಡಬೇಕು. ಮಠಾಧಿಪತಿಗಳನ್ನೋ, ರಾಜಕಾರಣಿಗಳನ್ನೋ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವುದು ಸಾಹಿತ್ಯ ಪರಿಷತ್‌ಗೆ ಶೋಭೆ ತರುವುದಿಲ್ಲ. ಮಠಾಧೀಶರನ್ನಿಟ್ಟುಕೊಂಡು ಧಾರ್ಮಿಕ ಸಮ್ಮೇಳನ ಮಾಡುತ್ತಿದ್ದೀರೋ ಅಥವಾ ರಾಜಕಾರಣಿಗಳನ್ನಿಟ್ಟುಕೊಂಡು ರಾಜಕೀಯ ಸಮಾವೇಶ ಮಾಡುತ್ತಿದ್ದೀರೋ ಎಂದು ಟೀಕಿಸಿದರು.

ಸರ್ ಎಂ.ವಿಶ್ವೇಶ್ವರಯ್ಯ ಅವರ ಮೊಮ್ಮಗಳನ್ನು ಅಮೆರಿಕಾದಲ್ಲಿ ಗುರುತಿಸಿ ಸಮ್ಮೇಳನಕ್ಕೆ ಆಹ್ವಾನಿಸಿದ್ದಾರೆ. ಜಿಲ್ಲೆಗೆ ಕೊಡುಗೆ ನೀಡಿದ ಟಿಪ್ಪು, ಶೇಷಾದ್ರಿ ಅಯ್ಯರ್ ಅವರ ಮರಿಮಕ್ಕಳು ಇಲ್ಲೇ ಇದ್ದಾರೆ. ಅವರನ್ನೇಕೆ ಆಹ್ವಾನಿಸಲಿಲ್ಲ. ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮುಂಬೈನ ಪೇಟೆಯಲ್ಲಿ ಒಂದೂವರೆ ಕ್ವಿಂಟಾಲ್ ಅರಮನೆಯ ಚಿನ್ನಾಭರಣವನ್ನು ಮಾರಾಟ ಮಾಡಿ ಕನ್ನಂಬಾಡಿ ಅಣೆಕಟ್ಟೆ ಕಟ್ಟಿದ್ದಾರೆ. ವಾಣಿ ವಿಲಾಸ ಸಾಗರವನ್ನು ನಿರ್ಮಿಸಿದ ಶೇಷಾದ್ರಿ ಅಯ್ಯರ್ ಅವರನ್ನೇಕೆ ನೆನೆಯುವುದಿಲ್ಲ ಎಂದು ಪ್ರಶ್ನಿಸಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸರ್ಕಾರಿ ಹಾಗೂ ಅನುದಾನಿತ ಸಾರ್ವಜನಿಕ ಕಾರ್ಯಕ್ರಮ. ಇದರಲ್ಲಿ ಎಲ್ಲ ಜಾತಿ, ಲಿಂಗ, ವರ್ಗಕ್ಕೆ ಸೇರಿದ ಜನರಿಗೆ ಮತ್ತು ಮಂಡ್ಯದ ಕಲೆ, ಸಾಹಿತ್ಯ, ಸಂಗೀತ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿಶೇಷಪ್ರಾತಿನಿಧ್ಯ ಒದಗಿಸುವುದು ಕಸಾಪದ ಸಂವಿಧಾನಬದ್ಧ ಕರ್ತವ್ಯವಾಗಿದೆ. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈವರೆವಿಗೂ ಹಿರಿಯ ಸಾಹಿತಿಗಳ ಸಭೆ ನಡೆಸಿ, ಸಮಾಲೋಚನಾ ಸಭೆಯನ್ನೂ ಕರೆಯದೆ ಡಾ.ಮಹೇಶ ಜೋಶಿ ಅವರು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಬಳಸುತ್ತಿರುವ ಭಾಷೆ, ಧೋರಣೆ ಮತ್ತು ನಡವಳಿಕೆಗಳು ಆಕ್ಷೇಪಾರ್ಹವಾಗಿದೆ. ಅದನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದು ಒತ್ತಾಯಿಸಿದರು.

ಸಾಹಿತ್ಯ ಸಮ್ಮೇಳನದ ವ್ಯವಹಾರಗಳು ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಇರಬೇಕೆಂಬ ಕಾರಣದಿಂದ ಸಮ್ಮೇಳನದ ಸಮಸ್ತ ಖರ್ಚು ವೆಚ್ಚಗಳ ಸೋಶಿಯಲ್ ಆಡಿಟ್‌ನ್ನು ಕಡ್ಡಾಯವಾಗಿ ಪಾಲಿಸಬೇಕು. ಮುಖ್ಯವಾಗಿ ಸಾಹಿತ್ಯೇತರ ವ್ಯಕ್ತಿಯನ್ನು ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆ ಮಾಡುವುದಕ್ಕೆ ನಮ್ಮ ಪ್ರಬಲ ವಿರೋಧವಿದೆ. ಅಂತಹ ಪ್ರಕ್ರಿಯೆ ನಡೆದಲ್ಲಿ ಬಹುದೊಡ್ಡ ಪ್ರತಿರೋಧವನ್ನು ಜಿಲ್ಲೆಯ ಜನರು ಕಸಾಪ ಅಧ್ಯಕ್ಷರಿಗೆ ತೋರಲಿದ್ದಾರೆ. ಗಾಂಧಿ ಮಾರ್ಗದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಕೀಲ ಬಿ.ಟಿ.ವಿಶ್ವನಾಥ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಸಾಹಿತಿ ಚಿಕ್ಕಮರಳಿ ಬೋರೇಗೌಡ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net