ಸಾಹಿತಿ ದೊಡಮನಿ ಕೊಡುಗೆ ಅಪಾರ

16Athani1
Published on

ಅಥಣಿ: ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ, ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಸಮಾಜದ ಉನ್ನತಿಗೆ ಶ್ರಮಿಸುತ್ತಿರುವ ಡಾ.ಜೆ.ಪಿ.ದೊಡಮನಿ ಕಾರ್ಯ ಶ್ಲಾಘನೀಯ ಎಂದು ಧಾರವಾಡ ಕವಿವಿ ನಿವೃತ್ತ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರ ಹೇಳಿದರು.

ತಾಲೂಕಿನ ಮೋಟಗಿಮಠದ ಸಭಾಂಗಣದಲ್ಲಿ ಡಾ.ಜೆ.ಪಿ.ದೊಡಮನಿ ಅಭಿನಂದನಾ ಸಮಿತಿ ವಿವಿಧ ಸಾಹಿತ್ಯ ಸಂಘಗಳ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜೆ.ಪಿ.ದೊಡಮನಿ ಸಾಹಿತ್ಯ ಅವಲೋಕನ, ಅಭಿನಂದನೆ, ಸಂಕೀರ್ಣ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಅವರ ಅನುವಾದ ಕೇವಲ ಅಭಿನಂದನಾ ಗ್ರಂಥವಲ್ಲ. ಸಮಗ್ರ ವ್ಯಕ್ತಿತ್ವ ತಿಳಿಸುವ ಹೊತ್ತಗೆ. ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು.

ಇಳಕಲ್ಲ ಗುರಮಹಾಂತ ಸ್ವಾಮೀಜಿ ಮಾತನಾಡಿ, ದೊಡಮನಿ ಅಭಿನಂದನಾ ಸಮಾರಂಭವು ಅನುಭಾವದ ವೇದಿಕೆಯಾಗಿದೆ. ವಿದ್ವಾಂಸ ಡಾ. ಎಂ.ಎಂ. ಕಲಬುರ್ಗಿ ಅರಿವಿನ ಸಂಸ್ಕಾರದಲ್ಲಿ ಬೆಳೆದ ಜೆಪಿ ಅವರಿಂದ ಇನ್ನಷ್ಟು ಗ್ರಂಥಗಳು ಬರಲಿ ಎಂದು ಹಾರೈಸಿದರು. ಸಾಹಿತಿ ಡಾ.ಜೆ.ಪಿ ದೊಡಮನಿ ಮಾತನಾಡಿ, ನನಗೆ ದಲಿತ ಎಂಬ ಭಾವನೆ ಎಲ್ಲಿಯೂ ಕಾಡಲಿಲ್ಲ. ಎಲ್ಲರೂ ಆತ್ಮೀಯವಾಗಿದ್ದು, ಕಂಡಿದ್ದು ಹಾಗೂ ಮಠಗಳ ಆಶ್ರಯದಿಂದ ಇಷ್ಟು ಸಾಹಿತ್ಯ ರಚನೆ ಮಾಡಲು ಸಾಧ್ಯವಾಗಿದೆ ಎಂದರು.

ಧಾರವಾಡ ವಿಶ್ರಾಂತ ಪ್ರಾಧ್ಯಾಪಕ ಡಾ.ಜೆ.ಎ.ಹಡಗಲಿ ಬಿಡುಗಡೆಗೊಳಿಸಿದರು. ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಹಂಪಿ ಕವಿವಿ ವಿಶ್ರಾಂತ ಉಪಕುಲಪತಿ ಡಾ.ಮುರಿಗೆಪ್ಪ, ಸಾಹಿತಿ ಡಾ.ವಿ.ಎಸ್.ಮಾಳಿ, ಪ್ರಾಧ್ಯಾಪಕ ಡಾ.ವೈ.ವೈ.ಕೊಕ್ಕನವರ ಮಾತನಾಡಿದರು. ದೊಡಮನಿ ದಂಪತಿಯನ್ನು ಸನ್ಮಾನಿಸಲಾಯಿತು. ಸಾಹಿತಿಗಳಾದ ಪ್ರಭಾ ಬೋರಗಾಂವಕರ, ಪ್ರಿಯಂವದಾ ಹುಲಗಬಾಳಿ, ರಾಮಣ್ಣ ದೊಡನಿಂಗಪ್ಪಗೋಳ, ದುರ್ಗಪ್ಪ ದೊಡಮನಿ, ಮಹೇಶ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net