

ಬೀಳಗಿ ನಮ್ಮ ಪೂರ್ವಜರು ಹಾಡುತ್ತಿದ್ದ ಹಂತಿಪದ, ಸೋಬಾನೆ ಪದಗಳು ಜಾನಪದಕ್ಕೆ ಸಾಕ್ಷಿ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ತಾಲೂಕಿನ ಅನಗವಾಡಿ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ವತಿಯಿಂದ ಆಯೋಜಿಸಿದ್ದ ಬಾಗಲಕೋಟೆ ಜಿಲ್ಲಾ ದ್ವಿತೀಯ ಕನ್ನಡ ಜಾನಪದ ಸಮ್ಮೇಳನದ ಸನ್ಮಾನ ಮತ್ತು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರ ಬಾಯಿಯಿಂದ ಬಾಯಿಗೆ ಪಸರಿಸಿದ ಸಾಹಿತ್ಯವೇ ಜಾನಪದವಾಗಿದೆ ಎಂದರು.
ಓದಲು ಬರೆಯಲು ಬರದಿದ್ದರೂ 25 ಕೃತಿ ರಚಿಸುವ ಮೂಲಕ ಜಾನಪದ ಆಶುಕವಿ ಸಿದ್ದಪ್ಪ ಬಿದರಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ. ಓರ್ವ ಸಮರ್ಥ ವ್ಯಕ್ತಿಯನ್ನು ಈ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಶ್ರೇಯಸ್ಸು ಜಾನಪದ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕಕ್ಕೆ ಸಲ್ಲುತ್ತದೆ ಎಂದರು.
ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ನಮ್ಮ ನೆಲೆಯನ್ನು ತೋರಿಸುವಂಥ ಜಾನಪದ ಪುರಾತನವಾದದ್ದು. ಜನರ ಕಿವಿಯಿಂದ ಕಿವಿಗೆ ಹರಡುತ್ತ ಬಂದಿದೆ. ಜಾನಪದದಲ್ಲಿ ದೇವರು ಮತ್ತು ಧರ್ಮವನ್ನು ನಿಂದನೆ ಮಾಡಿಲ್ಲ. ಸಂಸ್ಕಾರ ಬರಬೇಕಿದ್ದರೆ ಜಾನಪದ ಸಮ್ಮೇಳನಗಳು ಅವಶ್ಯಕ. ಇಂದು ಜಾನಪದದ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮಾತುಗಳನ್ನು ಬಳಸುತ್ತಿದ್ದಾರೆ. ಇದು ಸಮಾಜಕ್ಕೆ ತಪ್ಪು ಸಂದೇಶ ಕೊಡುತ್ತಿದೆ ಎಂದರು.
ಕವಿಗೋಷ್ಠಿಯಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಸಾಗರ ತೆಕ್ಕೆನ್ನವರ, ನಿವೃತ್ತ ಪ್ರಾಧ್ಯಾಪಕ ಎನ್.ಎಂ. ಕೂಗಲಿ, ವಿಶ್ರಾಂತ ಡಿಡಿಪಿಐ ಎಂ.ಜಿ. ದಾಸರ, ಪಿಕೆಪಿಎಸ್ ಅಧ್ಯಕ್ಷ ಮಲ್ಲಯ್ಯ.ಬಿ.ಕಂಬಿ, ಈರಣ್ಣ ದುಂ.ಗಾಣಗೇರ, ಪೀರಸಾಬ ನದಾ, ಡಾ. ಎಸ್.ಕೆ. ಬಂಗಾರಿ, ನಿಂಗರಾಜ ಮಬ್ರಮಕರ, ಕೀರಯ್ಯ ಮಠಪತಿ, ಆರ್.ವಿ. ಅಂಗಡಿ, ಸಂಗಮೇಶ ಶಾಂತಗಿರಿ, ಮಹೇಶ ಮಾದರ, ರಮೇಶ ಮಾದರ, ಬಸವ್ವ ಹೆಬ್ಬಾಳ, ಸುಲೋಚನಾ ಗಿರಿಯನ್ನವರ, ಇಂದ್ರವ್ವ ಗಡ್ಡಿ, ಶಿವಾನಂದ ಮಾದರ, ಶಿವಾನಂದ ಹಿರೇಮಠ ಇದ್ದರು.
ರಮೇಶ ಮೇಟಿ ನಿರೂಪಿಸಿದರು. ಬಸವರಾಜ ನಾಯ್ಕ ಸ್ವಾಗತಿಸಿದರು. ಎಂ.ಬಿ. ತಾಂಬೋಳಿ ವಂದಿಸಿದರು.