ಜುಲೈ 6, 7ರಂದು ಮೈಸೂರಿನಲ್ಲಿ ಸಾಹಿತ್ಯ ಸಂಭ್ರಮ

Published on

ಮೈಸೂರು: ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ಸ್ನಿಂದ ಜು.6 ಮತ್ತು 7ರಂದು ನಗರದಲ್ಲಿ ಮೈಸೂರು ಸಾಹಿತ್ಯ ಸಂಭ್ರಮ ಆಯೋಜಿಸಲಾಗಿದೆ.
ನಗರದ ಸದರನ್ ಸ್ಟಾರ್ ಹೋಟೆಲ್‌ನಲ್ಲಿ ಆಯೋಜಿಸಿರುವ ಎರಡು ದಿನಗಳ ಸಾಹಿತ್ಯ ಸಂಭ್ರಮಕ್ಕೆ ಜು.6ರಂದು ಬೆಳಗ್ಗೆ 10.15ಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡುವರು. ಚಲನಚಿತ್ರ ನಟ ರಮೇಶ್ ಅರವಿಂದ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂಗ್ಲಿಷ್ ಗೋಷ್ಠಿಯನ್ನು ಪ್ರಮೋದಾದೇವಿ ಒಡೆಯರ್ ಉದ್ಘಾಟಿಸಲಿದ್ದು, ಪರಿಸರವಾದಿ ನಟ ಸುರೇಶ್ ಹೆಬ್ಳೀಕರ್, ಲೇಖಕ ಮತ್ತು ಉದ್ಯಮಿ ಅರೂನ್ ರಮಣ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂಭ್ರಮದ ಇಂಗ್ಲಿಷ್ ಗೋಷ್ಠಿಯಲ್ಲಿ ಗ್ರಾಮ್ ಸಂಸ್ಥೆಯ ಸಂಸ್ಥಾಪಕ ಡಾ.ಬಾಲಸುಬ್ರಮಣ್ಯಂ ಅವರ ಪವರ್ ವಿತ್‌ಇನ್ ನರೇಂದ್ರ ಮೋದಿ ಕೃತಿಯನ್ನು ಲೇಖಕ ಡಾ.ವಿಕ್ರಂ ಸಂಪತ್ ಬಿಡುಗಡೆಗೊಳಿಸುವರು ಎಂದರು.
ಜು.6ರಂದು ಉದ್ಘಾಟನೆ ಬಳಿಕ ರಮೇಶ್ ಅರವಿಂದ್ ಅವರು ಬೆಳ್ಳಿತೆರೆಯಿಂದ ಬರವಣಿಗೆಗೆ: ಪ್ರೀತಿಯಿಂದ ರಮೇಶ್ ಕಾರ್ಯಕ್ರಮ ನಡೆಸಿಕೊಡುವರು. ಕಾಡು-ನಾಡು-ಕಾಪಾಡು ಸಾಹಿತ್ಯ ಸಿನಿಮಾ ಮತ್ತು ಪರಿಸರ ಚಿಂತನೆ ಕುರಿತ ವಿಚಾರಸಂಕಿರಣದಲ್ಲಿ ಸುರೇಶ್ ಹೆಬ್ಳೀಕರ್, ಶಶಿಧರ ಹಾಲಾಡಿ, ಲಕ್ಷ್ಮೀಕಾಂತರಾಜೇ ಅರಸ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಿರಿಧಾನ್ಯಗಳ ಸರದಾರ ಸುಸ್ಥಿರ ಬದುಕನ್ನು ಬಾಳುವುದು ಹೇಗೆ ವಿಷಯ ಕುರಿತು ಡಾ.ಖಾದರ್ ವಲ್ಲಿ ಮಾತನಾಡುವರು. ಮಧ್ಯಾಹ್ನ ಸುದ್ದಿ ಸರ್ಕಸ್‌ಗಳ ನಡುವೆ ಮಾಧ್ಯಮಗಳ ಜವಾಬ್ದಾರಿಗಳು ಕುರಿತ ವಿಚಾರಸಂಕಿರಣದಲ್ಲಿ ಹಿರಿಯ ಪತ್ರಕರ್ತ ರವೀಂದ್ರ ಭಟ್, ಅಂಶಿ ಪ್ರಸನ್ನಕುಮಾರ್, ಧರ್ಮೇಂದ್ರಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಸರೋದ್ ಮಾಂತ್ರಿಕನ ಸುಮಧುರ ನೆನಪುಗಳ ಕುರಿತು ಸುರೇಶ್ ಹೆಬ್ಳೀಕರ್, ರೂಮಿ ಹರೀಶ್ ಮತ್ತು ಕೃಷ್ಣ ಮನವಳ್ಳಿ ಮಾತನಾಡುವರು. ಕನ್ನಡ ಕಾವ್ಯ ಕಣಜ ನಾಟಕವನ್ನು ಮಂಡ್ಯ ರಮೇಶ್ ನಿರ್ದೇಶನದಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಜು.7ರಂದು ಬೆಳಗ್ಗೆ ಏಕವ್ಯಕ್ತಿ ತಾಳಮದ್ದಳೆಯನ್ನು ದಿವಾಕರ ಹೆಗಡೆ ತಂಡದವರು ಪ್ರಸ್ತುತಪಡಿಸುವರು. ಮಾಯಾಲೋಕ ಕುರಿತು ಗಿರೀಶ್ ಕಾಸರವಳ್ಳಿ ಮಾತನಾಡಲಿದ್ದು, ದೀಪಾ ರವಿಶಂಕರ್, ಗೋಪಾಲಕೃಷ್ಣ ಪೈ ಪಾಲ್ಗೊಳ್ಳುವರು. ಭಾಷಾ ಪಾಂಡಿತ್ಯ ಸೃಜನಶೀಲತೆಯನ್ನು ಮಸಕು ಮಾಡುವುದೇ ವಿಷಯ ಕುರಿತು ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡುವರು ಎಂದು ಹೇಳಿದರು.
ನಗಿಸುವವನ ಮನದ ಮಾತಿನಲ್ಲಿ ಹಾಸ್ಯ ಕಾರ್ಯಕ್ರಮವನ್ನು ಗಂಗಾವತಿ ಪ್ರಾಣೇಶ್, ಡಾ.ಮಾಧುರಿ ಕುಲಕರ್ಣಿ ನಡೆಸಿಕೊಡುವರು. ಅಂತರ್ಜಾಲ ಯುಗದಲ್ಲಿ ಸಂಬಂಧಗಳ ಸುಳಿಗಳು ಕುರಿತು ಉಷಾ ನರಸಿಂಹನ್, ಬಿ.ಆರ್.ನಾಗರತ್ನಾ, ಎನ್.ಸಂಧ್ಯಾರಾಣಿ, ವಸುಮತಿ ಉಡುಪ ಮಾತನಾಡುವರು. ಆನ್‌ಲೈನ್ ಸಂಬಂಧಗಳ ಸಮಾಜದಲ್ಲಿ ಕವನಗಳ ಪ್ರಸ್ತುತತೆ ಕುರಿತು ಎಚ್.ಎಸ್.ಶಿವಪ್ರಕಾಶ್, ಡಾ.ಬಿ.ಆರ್.ಶ್ರುತಿ, ಮಧುರಾಣಿ, ಅರೀಫ್ ರಾಜ, ರಾಜೇಂದ್ರಪ್ರಸಾದ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಜ್ಞಾತ ಅಲೆಮಾರಿ ಕಲಾವಿದರ ಜತೆಗೆ 60 ನಿಮಿಷಗಳು ಕಾರ್ಯಕ್ರಮದಲ್ಲಿ ಶಿಳ್ಳೆಕ್ಯಾತರ ಮಂಜುನಾಥ್, ಹೆಳವರಸೊಲ್ಲಿನ ಮಲ್ಲಯ್ಯ ಮ್ಯೂಜಿಕ್, ಕಲಾವಿದ ಸಯ್ಯದ್ ಮೌಲಾ, ದೊಂಬರ ನರಸಿಂಹ ಮತ್ತು ರಾಣಿ ಇತರರು ಭಾಗವಹಿಸಲಿದ್ದು, ಅಬ್ದುಲ್ ರಶೀದ್ ಕಾರ್ಯಕ್ರಮ ನಡೆಸಿಕೊಡುವರು. ಪ್ರಕಾಶನ ಕಲೆ-ಓದುಗರ ಮತ್ತು ಲೇಖಕರ ನಡುವಿನ ಕೊಂಡಿ ವಿಷಯದಲ್ಲಿ ಜಮೀಲ್ ಸಾವಣ್ಣ, ಪ್ರತಿಭಾ ಛಾಯಾಪತಿ, ನಿಂಗರಾಜು ಚಿತ್ತಣ್ಣನವರ್, ಅಭಿರುಚಿ ಗಣೇಶ್, ಮೀನಾ ಮೈಸೂರು ಮಾತನಾಡುವರು ಎಂದರು.
ಭಾಷಾಂತರ ಸಾಂಸ್ಕೃತಿಕ ಸಂಬಂಧಗಳ ಜಾಲತಾಣದ ಪಾಸ್ ವರ್ಡ್ ಕುರಿತು ಸಾಹಿತಿ ಡಾ. ಪ್ರಧಾನ ಗುರುದತ್ತ ಮಾತನಾಡುವರು. ವಿಕ್ರಂ ಚದುರಂಗ, ಧರ್ಮೇಂದ್ರ ಕುಮಾರ್ ಪಾಲ್ಗೊಳ್ಳುವರು. ಸಮಾಜ ಪರ ಪೊಲೀಸ್ ಕುರಿತು ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಮಾತನಾಡುವರು ಎಂದು ವಿವರಿಸಿದರು.
ಇಂಗ್ಲಿಷ್ ಆವೃತ್ತಿಯ ಗೋಷ್ಠಿಗಳಲ್ಲಿ ಅಶ್ವಿನಿ ಸಾಂಘಿ, ಗಿರೀಶ್ ಕಾರಸವಳ್ಳಿ, ವಿಕ್ರಮ್ ಸಂಪತ್, ಅರೂಣನ್ ರಾಮಣ್, ರಾಜೇಶ್ ರಾಮಚಂದರ್, ಶಾಂತನು ರಾಯ್ ಚೌಧರಿ, ಮೈಥಿಲಿ ರಾವ್, ಬಾಲಾಜಿ ವಿಠಲ್, ಶುಭಾ ನಾರಾಯಣ್, ಮೋನಿಕಾ ಮೊನಾಲಿಸ್ಟ್, ವಿಜಯ್ ಬಾಲ್, ಶಶಿಕಲಾ ರಾಮನಾಥ್, ರುಗ್ಮಿನಿ ಪ್ರಭಾಕರ್, ಕವಿತಾ ರತ್ನ, ಸೋನ್ಯ ಜೆ.ನಾಯರ್, ಸೋನಾಲಿ ಪಟ್ನಾಯಕ್, ಅನುಜಾ ಚಂದ್ರಮೌಳಿ, ರವಿ ಜೋಷಿ, ನಿಖಿಲ್ ಜೆ.ಆಳ್ವಾ, ಕೃಷ್ಣನ್ ಶ್ರೀನಿವಾಸನ್, ಸೋನಾಜಿ ಸಬರ್ವಾಲ್ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಲಿಟರರಿ ಫೆಸ್ಟ್ನ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಸಂಘಟಕರಾದ ಶ್ಯಾಮ್ ಚರಿಯನ್, ಸಿ.ಆರ್.ಹನುಮಂತ್, ದಿವ್ಯಶ್ರೀ, ಸುಚಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net