ಆಮೂರರಿಗೆ ಸಾಹಿತ್ಯ ವಿಮರ್ಶೆಯೇ ಜೀವನ

dwd 1
Published on

ಧಾರವಾಡ: ಜೀವನವೇ ಸಾಹಿತ್ಯ, ಸಾಹಿತ್ಯವೇ ಜೀವನ ಇದು ಬೇಂದ್ರೆ ಹಾಗೂ ಆಮೂರ ಇಬ್ಬರಿಗೂ ಸಲ್ಲುವ ಮಾತು. ಜಿ.ಎಸ್. ಆಮೂರ ಅವರಿಗೆ ಜೀವನವೇ ವಿಮರ್ಶೆ, ವಿಮರ್ಶೆಯೇ ಜೀವನವಾಗಿತ್ತು ಎಂದು ಹಿರಿಯ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.

ನಗರದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಡಾ. ಜಿ.ಎಸ್. ಆಮೂರ ಜನ್ಮಶತಮಾತೋತ್ಸವ ಸಮಿತಿ ಸಹಯೋಗದಲ್ಲಿ ನಗರದ ಸೃಜನಾ ರಂಗಮಂದಿರಲ್ಲಿ ಗುರುವಾರ ಆಯೋಜಿಸಿದ್ದ ಡಾ. ಜಿ.ಎಸ್. ಆಮೂರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಆಮೂರರ ನೆನಪು ಮಾಡಿಕೊಳ್ಳುವುದೆಂದರೆ ಕಾವ್ಯ ಮತ್ತು ವಿಮರ್ಶೆಯ ಸಂಬಂಧದ ಸ್ಪರ್ಶವನ್ನು ಮತ್ತೊಮ್ಮೆ ಮಾಡಿಕೊಳ್ಳುವುದು. ಕವಿತೆ ನಾಟಕ, ಕತೆ, ಕಾದಂಬರಿ ಸೃಷ್ಟಿಶೀಲ ರಚನೆ ಎನ್ನುತ್ತೇವೆ. ಇವು ವಿಮರ್ಶೆಯೂ ಅಲ್ಲವೇ? ಎಂಬುದನ್ನು ವಿಮರ್ಶಿಸಬೇಕಾಗಿದೆ ಎಂದರು. ಬೇಂದ್ರೆ ಪುನರಜ್ಜೀವನದ ಕವಿ. ಆಮೂರ, ಕುರ್ತಕೋಟಿ, ಮೊಕಾಶಿ, ಗಿರಡ್ಡಿ ಗೋವಿಂದರಾಜ ಪುನರಜ್ಜೀವನದ ವಿಮರ್ಶಕರು. ಆ ಕಾಲ ಅವರನ್ನು ರೂಪಿಸಿತು ಎಂದರು.

ರಾಘವೇಂದ್ರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಆಮೂರ ಅವರು ಆಧುನಿಕ ಕನ್ನಡ ಸಾಹಿತ್ಯವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ವಿಮರ್ಶೆ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಬದ್ಧತೆ, ಪ್ರತಿಭೆ, ವ್ಯತ್ಪತ್ತಿ ಮತ್ತು ಆನ್ವಯ ಶಕ್ತಿ ಅವರಲ್ಲಿತ್ತು. ವಿಮರ್ಶೆ ಕಾರ್ಯವನ್ನು ವ್ರತವಾಗಿ ನಿರ್ವಹಿಸಿದವರು ಎಂದು ಹೇಳಿದರು.

ವಿಮರ್ಶಕನಿಗೆ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಕಾಳಜಿ ಇರಬೇಕು. ಅದು ಆಮೂರರಿಗೆ ಇತ್ತು. ಅವರ ವಿಮರ್ಶೆಯು ಸೌಂದರ್ಯಾತ್ಮಕ ಮತ್ತು ಸಾಹಿತ್ಯಿಕ ವಿಮರ್ಶೆಯ ಮಿಳಿತವಾಗಿತ್ತು ಎಂದರು.

ಜಯಂತ ಆಮೂರ ಮಾತನಾಡಿದರು. ಡಾ. ಆಮೂರ ಜನ್ಮಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಿ.ಎಂ. ಹೆಗಡೆ ವೇದಿಕೆಯಲ್ಲಿದ್ದರು. ಜಿ.ಎಸ್ ಆಮೂರ ಅವರ ಸಮಗ್ರ ಬೇಂದ್ರೆ ವಿಮರ್ಶೆ ಮತ್ತು ಬೆಳಕಿನ ಬೆಳೆ ಕೃತಿಗಳನ್ನು ಕಸಾಪ ಮಾಜಿ ಅಧ್ಯಕ್ಷ ಡಾ. ಮನು ಬಳಿಗಾರ ಹಾಗೂ ಜಯಂತ್ ಕಾಯ್ಕಿಣಿ ಬಿಡುಗಡೆ ಮಾಡಿದರು. ಡಾ. ಜಿ.ಎಂ. ಹೆಗಡೆ, ರಾಘವೇಂದ್ರ ಪಾಟೀಲ, ಪ್ರಕಾಶಕ ಎಂ.ಎ. ಸುಬ್ರಹ್ಮಣ್ಯ, ಹ.ವೆಂ. ಕಾಖಂಡಕಿ ಇದ್ದರು. ಕೃಷ್ಣ ಕಟ್ಟಿ ಸ್ವಾಗತಿಸಿದರು. ರಾಧಿಕಾ ಕಾಖಂಡಕಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net