

ಮೈಸೂರು: ಬರವಣಿಗೆಯನ್ನು ತಪ್ಪಸ್ಸಿನ ರೀತಿ ಯಾರು ಪರಿಗಣಿಸುತ್ತಾರೋ ಅಂತಹವರು ಮಾತ್ರ ಸಾಹಿತ್ಯ ರಚನೆ ಮಾಡಲು ಸಾಧ್ಯ ಎಂದು ಬೀದರ್‌ನ ಎನ್‌ಎಸ್‌ಎಸ್‌ಕೆ ಮ್ಯಾನೇಜಿಂಗ್ ಕನ್ಸಲ್‌ಟೆಂಟ್ ಬಿ.ಎಸ್.ಅಪರಂಜಿ ಅಭಿಪ್ರಾಯಪಟ್ಟರು.
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಕಬೀರ್ ಪ್ರಕಾಶನದಿಂದ ನಗರದ ರೋಟರಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಕವಿ ಎನ್.ಮೊಹಮ್ಮದ್ ಹುಮಾಯಾನ್ ರಚಿತ ‘ಭಾವದಿಂಚರ ಕವನ ಸಂಕಲನ, ಸಾಧಕ ಶಿಕ್ಷಕರಿಗೆ ‘ವಿದ್ಯಾವಾರಿಧಿ ಪ್ರಶಸ್ತಿ ಪುರಸ್ಕಾರ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗದ್ಯವಾಗಲಿ, ಪದ್ಯವಾಗಲಿ ರಚನೆ ಮಾಡಲು ಸುಮ್ಮನೆ ಬರುವುದಿಲ್ಲ. ಬದಲಾಗಿ, ಬರವಣಿಗೆಯನ್ನು ತಪ್ಪಸ್ಸಿನ ರೀತಿ ಯಾರು ಪರಿಗಣಿಸುತ್ತಾರೋ ಅಂತಹವರು ಮಾತ್ರ ರಚನೆ ಮಾಡಲು ಸಾಧ್ಯ ಎಂದರು.
ಕವಿ ಎನ್.ಮೊಹಮ್ಮದ್ ಹುಮಾಯಾನ್ ರಚಿತ ‘ಭಾವದಿಂಚರ ಕವನ ಸಂಕಲನದಲ್ಲಿರುವ 70ಕ್ಕೂ ಹೆಚ್ಚು ಕವಿತೆಗಳು ಉತ್ತಮವಾಗಿ ಮೂಡಿಬಂದಿವೆ. ಅವರ ಜತೆಗೆ ಇನ್ನಷ್ಟು ಸಾಧಕರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರಾದ ಬಿ.ರವೀಶ್‌ಕುಮಾರ್, ರಾಮಚಂದ್ರ ಭಟ್, ಉಷಾಮಣಿ, ಸಿ.ಎಸ್.ರಾಘವೇಂದ್ರ, ಜೈಬುನ್ನೀಸ ಅವರಿಗೆ ‘ವಿದ್ಯಾವಾರಿಧಿ’ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಎನ್.ಅನು, ವರ್ಷ ಮಹೇಶ್, ದೀಕ್ಷಾ ಸಿ.ಅರಸ್ ಅವರನ್ನು ಅಭಿನಂದಿಸಲಾಯಿತು.
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಎಂ.ಬಿ.ಸಂತೋಷ್, ಪ್ರಧಾನ ಕಾರ್ಯದರ್ಶಿ ಬಿ.ಶೋಭಾ, ನಿವೃತ್ತ ಶಿಕ್ಷಕ ಬಿ.ರವೀಶ್‌ಕುಮಾರ್, ಪ್ರತಿಷ್ಠಾನದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಸಿ.ವಾಣಿ ರಾಘವೇಂದ್ರ, ಲೇಖಕ ಎನ್.ಮೊಹಮ್ಮದ್ ಹುಮಾಯಾನ್, ವಿವಿಧ ಪದಾಧಿಕಾರಿಗಳಾದ ಎನ್.ಸಿ.ಮಮತಾ, ಹೇಮಗಂಗಾ, ಸೌಗಂಧಿಕಾ ವಿ.ಜೋಯಿಸ್, ರೇಖಾ ಸಂತೋಷ್, ಎಸ್.ವಿ.ಪನ್ನಗ, ಎನ್.ಆರ್.ರೂಪಶ್ರೀ, ಕೆ.ಪ್ರೇಮಾಕುಮಾರ, ನೀತು ಎಸ್.ರಾಜ್ ಇತರರು ಇದ್ದರು.