

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಿನ ದಿನಗಳಲ್ಲಿ ಏರ್ಪಡಿಸಲಾಗುವುದು ಎಂದು ಶಾಸಕ ಕೆ.ಹರೀಶ್‌ಗೌಡ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಭೂಮಿಗಿರಿ ನಾರಾಯಣಪ್ಪ ಪ್ರತಿಷ್ಠಾನದ ಸಹಯೋಗದಲ್ಲಿ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಭೂಮಿಗಿರಿ ನಾರಾಯಣಪ್ಪ ಪ್ರಶಸ್ತಿ ಪ್ರದಾನ, ಸಂಗೀತ ಸಂಜೆ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯದ ಗತವೈಭವ ಮರುಕಳಿಸಬೇಕು. ಸಿಪಿಕೆ ಆದಿಯಾಗಿ ಹಲವು ಸಾಹಿತಿ, ಗಣ್ಯರು ಮೈಸೂರಿನಲ್ಲಿ ಭಾಗವಹಿಸುತ್ತಿದ್ದರು. ಮುಂದೆ ಕೂಡ ಅದೇ ರೀತಿ ಆಗಬೇಕು. ಇದಕ್ಕಾಗಿಯೇ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದರು.
ಗಾನ-ನಂದನ ಲಾಂಛನ ಅನಾವರಣ ಮಾಡಿದ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಜ್ಞಾನ ಭಂಡಾರವನ್ನು ಹಂಚಬೇಕು. ದುಡ್ಡು ಮತ್ತು ಬ್ಲಡ್ಡು ಒಂದೆಡೆ ಸಂಗ್ರಹವಾಗಬಾರದು. ಹಂಚಿದಷ್ಟು ಬೆಳೆಯುತ್ತದೆ ಎಂದರು.
ಶ್ರೀರಾಮ ಪಿತೃವಾಕ್ಯ ಪರಿಪಾಲಕ ಎಂದು ಹೇಳುವ ನಾವು ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದೇವೆ. ಇದು ತಪ್ಪಬೇಕು. ಭೂಮಿಗಿರಿ ನಾರಾಯಣಪ್ಪ ಅವರಂಥವರನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಆ ಮೂಲಕ ಸಮಾಜದ ಪರಿವರ್ತನೆಗೆ ಕಾರಣಕರ್ತರಾಗಬೇಕು ಎಂದು ಅವರು ಕರೆ ನೀಡಿದರು.
ಪ್ರಸ್ತುತ ಶಿಕ್ಷಣಕ್ಕೆ ಅಪಾರ ಬೆಲೆ ಇರುವುದರಿಂದ ಮುಂದಿನ ದಿನಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ತಾಂಡವಪುರ ಎಂಐಟಿ ಪ್ರಾಂಶುಪಾಲ ಡಾ.ವೈ.ಟಿ.ಕೃಷ್ಣೇಗೌಡ, ಲೇಖಕಿ ಬಿ.ಕೆ.ಮೀನಾಕ್ಷಿ ಅವರಿಗೆ ಭೂಮಿಗಿರಿ ನಾರಾಯಣಪ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ, ಭೂಮಿಗಿರಿ ಪ್ರತಿಷ್ಠಾನದ ಅಧ್ಯಕ್ಷ ಎನ್.ಬೆಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಶೇಖರ್ ಇನ್ನಿತರರಿದ್ದರು