ವಿಜಯವಾಣಿ ಸುದ್ದಿಜಾಲ ಕಡಬ
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಡಬ ತಾಲೂಕು ಘಟಕದ ನೇತೃತ್ವದಲ್ಲಿ ಕುಂತೂರು ಪದವಿನಲ್ಲಿ ನಡೆಯಲಿರುವ ಕಡಬ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಯ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಕುಂತೂರು ಪದವಿನ ಸೇಂಟ್ ಜಾರ್ಜ್ ಅನುದಾನಿತ ಪ್ರೌಢಶಾಲೆಯಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ಅಧ್ಯಕ್ಷತೆ ವಹಿಸಿ, ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಿ ಮಾದರಿ ಸಮ್ಮೇಳನವಾಗುವಂತೆ ಸಹಕರಿಸಲು ಮನವಿ ಮಾಡಿದರು.
ಸಮ್ಮೇಳನವನ್ನು ನ.30ರಂದು ಕುಂತೂರು ಪದವಿನ ಸೇಂಟ್ ಜಾರ್ಜ್ ಅನುದಾನಿತ ಪ್ರೌಢಶಾಲೆಯಲ್ಲಿ ನಡೆಸಲು ತೀರ್ಮಾನಿಸಲಾಯಿತು. ಅಧ್ಯಕ್ಷರ ನೇತೃತ್ವದಲ್ಲಿ ಸ್ವಾಗತ ಸಮಿತಿಯ ಪದಾಧಿಕಾರಿಗಳನ್ನು ಹಾಗೂ ಉಪ ಸಮಿತಿಗಳ ಸಂಚಾಲಕರನ್ನು ಎಲ್ಲರ ಸಮ್ಮತಿಯೊಂದಿಗೆ ಆಯ್ಕೆ ಮಾಡಲಾಯಿತು. ಹಿರಿಯ ಸಾಹಿತಿ ನಾರಾಯಣ ಭಟ್ ಟಿ. ವಿವಿಧ ಸಮಿತಿಗಳ ಸಂಚಾಲಕರ ಜವಾಬ್ದಾರಿಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಸೇಂಟ್ ಜಾರ್ಜ್ ಪ್ರೌಢ ಶಾಲೆ ಸಂಚಾಲಕ ವಿ.ವಿ.ಅಬ್ರಹಾಂ, ಮಾಜಿ ಸಂಚಾಲಕ ರೋಯಿ ಅಬ್ರಹಾಂ, ಕಾರ್ಯದರ್ಶಿ ವಿ.ವಿ.ವರ್ಗೀಸ್, ರಾಮಕುಂಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ., ಪರಿಷತ್ತಿನ ಕಡಬ ತಾಲೂಕು ಘಟಕದ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಕುಂತೂರು ಗ್ರಾ.ಪಂ. ಅಧ್ಯಕ್ಷೆ ಸಂಧ್ಯಾ, ಪರಿಷತ್ತಿನ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ ಮುಂತಾದವರು ಸಭೆಯಲ್ಲಿ ಸೂಕ್ತ ಸಲಹೆ ಸೂಚನೆ ನೀಡಿದರು.
ಕಡಬ ತಾಲೂಕು ಘಟಕದ ಪದಾಧಿಕಾರಿಗಳಾದ ವೆಂಕಟ್ರಮಣ ಭಟ್ ನೆಲ್ಯಾಡಿ, ಎನ್.ಕೆ.ನಾಗರಾಜ್, ಕಿಶೋರ್ ಕುಮಾರ್ ಬಿ., ಗ್ರೇಸಿ ಪಿಂಟೋ, ಗ್ರಾ.ಪಂ.ಸದಸ್ಯರು, ಸೇಂಟ್ ಜಾರ್ಜ್ ಶಾಲಾ ನಿವೃತ್ತ ಶಿಕ್ಷಕರು, ಶಿಕ್ಷಕ ವೃಂದ, ಪಾಲಕರು, ಯುವಕ ಮಂಡಲದ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ಪರಿಸರದ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು. ಸೇಂಟ್ ಜಾರ್ಜ್ ಮುಖ್ಯಶಿಕ್ಷಕ ಹರಿಶ್ಚಂದ್ರ ಕೆ.ಸ್ವಾಗತಿಸಿ, ಬಾಲಚಂದ್ರ ಮುಚ್ಚಿಂತಾಯ ವಂದಿಸಿದರು.