23 ರಂದು ಅರಂತೋಡಿನಲ್ಲಿ ಸಾಹಿತ್ಯ ಸಮ್ಮೇಳನ : ಸಾಹಿತಿ ಲೀಲಾ ದಾಮೋದರ ಸಮ್ಮೇಳನಾಧ್ಯಕ್ಷೆ

Published on

ಸುಳ್ಯ: ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ನ.23ರಂದು ಹಿರಿಯ ಸಾಹಿತಿ ಲೀಲಾ ದಾಮೋದರ ಅಧ್ಯಕ್ಷತೆಯಲ್ಲಿ ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ವಿದ್ಯಾಲಯದಲ್ಲಿ ನಡೆಯಲಿದೆ.

ಬೆಳಗ್ಗೆ 9ಕ್ಕೆ ಅರಂತೋಡು ಗ್ರಾಪಂ ಕಚೇರಿ ಬಳಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆಗೆ ನಿವೃತ್ತ ಮುಖ್ಯಶಿಕ್ಷಕ ಹೊನ್ನಪ್ಪ ಮಾಸ್ತರ್ ಅಡ್ತಲೆ ಚಾಲನೆ ನೀಡಲಿದ್ದಾರೆ. 9.30ಕ್ಕೆ ರಾಷ್ಟ್ರ ಧ್ವಜಾರೋಹಣ ಅರಂತೋಡು ಗ್ರಾಪಂ ಅಧ್ಯಕ್ಷ ಕೇಶವ ಅಡ್ತಲೆ ಹಾಗೂ ಪರಿಷತ್ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ನೆರವೇರಿಸಲಿದ್ದಾರೆ. 9.45ಕ್ಕೆ ತಹಸೀಲ್ದಾರ್ ಮಂಜುಳಾ ಪುಸ್ತಕ ಪ್ರದರ್ಶನದ ಉದ್ಘಾಟಿಸಲಿದ್ದಾರೆ ಎಂದ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೇಶವ ಅಡ್ತಲೆ ಹಾಗೂ ಸಂತೋಷ್ ಕುತ್ತಮೊಟ್ಟೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಹಿತಿ ನರೇಂದ್ರ ರೈ ದೇರ್ಲ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಕೃತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ.

ಸಾಹಿತಿ ವಿಮಲಾರುಣ ಪಡ್ಡಂಬೈಲು ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಸಾಹಿತಿ ನಂದಕುಮಾರ ಸ್ವಾಮಿ ಅಧ್ಯಕ್ಷತೆಯಲ್ಲಿ ನಿರಂಜನ ಶತಮಾನೋತ್ಸವ ಸ್ಮರಣೆ ವಿಚಾರಗೋಷ್ಠಿ, ಕನ್ನಡ ಭಾಷೆ ಅನ್ನದ ಭಾಷೆ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳ ಚರ್ಚೆಗೋಷ್ಠಿ, ಕೆ.ಆರ್.ಗೋಪಾಲಕೃಷ್ಣ ಹಾಗೂ ಪೂರ್ಣಿಮಾ ಅವರಿಂದ ಗೀತಾ ಗಾಯನ, ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆಯಲ್ಲಿ ಸಮಾರೋಪ ಹಾಗೂ ಕನ್ನಡ ಕಸ್ತೂರಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಉಳ್ಳಾಲ ತಾಲೂಕು ಕಸಾಪ ಅಧ್ಯಕ್ಷ ಧನಂಜಯ ಕುಂಬ್ಳೆ ಸನ್ಮಾನ ನೆರವೇರಿಸಲಿದ್ದಾರೆ. ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಸಾಧಕರನ್ನು ಸನ್ಮಾನಿಸಲಿದ್ದಾರೆ. ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆಯ ಡಾ.ಉಮ್ಮರ್ ಬೀಜದಕಟ್ಟೆ ಭಾಗವಹಿಸಲಿದ್ದಾರೆ. ಡಾ.ಶ್ವೇತಾ ಮಡಪ್ಪಾಡಿ ಮತ್ತು ಬಳಗದವರಿಂದ ಭಾವಗಾನ ಕನ್ನಡ ಗೀತೆಗಳ ಗಾಯನ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲ್ ಸುಳ್ಯದ ವಿದ್ಯಾರ್ಥಿಗಳಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ, ಅರೆಭಾಷೆ ಸಿರಿ ಸಂಸ್ಕೃತಿ-ನೃತ್ಯ ರೂಪಕ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಸಾಪದ ಅಧ್ಯಕ್ಷ ಚಂದ್ರಶೇಖರ ಪೇರಾಲು, ಪ್ರಮುಖರಾದ ಚಂದ್ರಾವತಿ ಬಡ್ಡಡ್ಕ, ಬಾಬು ಗೌಡ, ಕೇಶವ ಮಾಸ್ತರ್ ಸಿ.ಎ, ತೇಜಸ್ವಿ ಕಡಪಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net