ಒಳಗಿನ ತುಡಿತವನ್ನು ಹೊರಹಾಕಲು ಸಾಹಿತ್ಯ ರಚನೆ ಸಹಾಯಕ

14 CRP-1A
Published on

ಚನ್ನರಾಯಪಟ್ಟಣ: ಪುಸ್ತಕ ಬರೆಯುವುದು ಕರ್ತೃವಿನೊಳಗಿನ ಅಂತರಾಳವನ್ನು ಹೊರ ಪ್ರಪಂಚಕ್ಕೆ ತೆರೆದಿಟ್ಟಂತೆ. ಪುಸ್ತಕ ಬರೆಯುವುದರಿಂದ ಹಣ ಸಿಗುತ್ತದೆ ಎಂಬುದು ಸುಳ್ಳು, ಇದು ಎಲ್ಲರ ವಿಷಯದಲ್ಲೂ ಒಂದೇ ಇರುವುದಿಲ್ಲ. ಒಳಗಿನ ತುಡಿತವನ್ನು ಹೊರಹಾಕಲು ಸಾಹಿತ್ಯ ರಚನೆ ನೆರವಾಗುತ್ತದೆ ಎಂದು ಜಾನಪದ ಆಕಾಡೆಮಿ ಪ್ರಶಸ್ತಿ ಪುರಸ್ಕೃತ, ವಿದ್ವಾಂಸ ಡಾ.ಚಂದ್ರು ಕಾಳೇನಹಳ್ಳಿ ತಿಳಿಸಿದರು.


ಪಟ್ಟಣದ ಗಾಯತ್ರಿ ಬಡಾವಣೆಯಲ್ಲಿರುವ ಪ್ರತಿಮಾ ಟ್ರಸ್ಟ್ ರಂಗಲೋಕದಲ್ಲಿ ಇತ್ತೀಚೆಗೆ ರಂಗಕರ್ಮಿ ಉಮೇಶ್ ತೆಂಕನಹಳ್ಳಿ ಬರೆದಿರುವ ಚೊಚ್ಚಲ ಕೃತಿ ಕಪ್ಪು ಹಲ್ಲಿನ ಕಥೆಗಳು ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಹಿತ್ಯದ ಓದುವಿಕೆ ಮನುಷ್ಯನನ್ನು ಸಂಸ್ಕಾರಯುತನನ್ನಾಗಿಸುತ್ತದೆ. ಇದರಿಂದ ಯಶಸ್ಸು ಗಳಿಸಲೂ ಸಾಧ್ಯವಾಗಬಹುದು ಎಂದರು.


ಯಾವುದೇ ಕೃತಿಯು ಪ್ರತಿ ಬಾರಿ ಓದಿದಾಗಲೂ ಹೊಸ ಅನುಭವ ನೀಡಿದರೆ ಅದರ ಸಾರ್ಥಕತೆಯಾದಂತೆ. ಉದಯನ್ಮೋಖ ಲೇಖಕರಿಗೆ ಹಲವು ಸವಾಲುಗಳಿದ್ದು, ಅವುಗಳನ್ನು ದಿಟ್ಟವಾಗಿ ಎದುರಿಸಬೇಕಾಗಿದೆ. ಸಾಹಿತ್ಯದ ಓದನ್ನು ಮರೆತಿರುವ ಜನ ಮೊಬೈಲ್ ನೋಡುವುದಕ್ಕೆ ತಮ್ಮ ಸಮಯ ವಿನಿಯೋಗ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.


ರಂಗಕರ್ಮಿ ಪ್ರಸಾದ್ ರಕ್ಷಿದಿ ಮಾತನಾಡಿ, ಅಧ್ಯಯನ ಮತ್ತು ಅನುಭವಗಳಿಂದ ಸಾಹಿತ್ಯದ ಮಜಲುಗಳನ್ನು ಗುರುತಿಸಬಹುದಾಗಿದ್ದು, ಅಧ್ಯಯನವಿಲ್ಲದಿದ್ದರೇ ಸಾಹಿತ್ಯದ ಸೂಕ್ಷ್ಮತೆ ತಿಳಿಯುವುದಿಲ್ಲ, ಕಲೆಯನ್ನು ಕೇವಲ ಮಾರಾಟದ ಸರಕಾಗಿ ನೋಡಬಾರದು, ನಮ್ಮ ಸಮಾಜ, ಸಾಂಸ್ಕೃತಿಕವಾಗಿ ಹಿಂದೆ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಬೇಕು ಎಂದರು.


ಕಾದಂಬರಿ ಕರ್ತೃ ಉಮೇಶ್ ತೆಂಕನಳ್ಳಿ, ಮೆಳಿಯಮ್ಮ ಆಧ್ಯಾತ್ಮೀಕ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ ಗುರೂಜಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್ ಮಾತನಾಡಿದರು, ಮೈಸೂರು ರಂಗಾಯಣ ರಂಗ ನಿರ್ದೇಶಕ ಅರಸೀಕೆರೆ ಯೋಗಾನಂದ್, ಬಿ.ಆರ್.ರವೀಶ್, ಪತ್ರಿಮಾ ಟ್ರಸ್ಟ್‌ನ ಸಂಚಾಲಕ ಎ.ಎಲ್.ನಾಗೇಶ್ ಸೇರಿ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net