ಸರ್ವಾಂಗೀಣ ಪ್ರಗತಿಗೆ ಸಾಕ್ಷರತೆ ಪ್ರಮಾಣ ಹೆಚ್ಚಳವಾಗಬೇಕು

ಸಾಕ್ಷರತಾ-ದಿನಾಚರಣೆ-2-2.jpeg
Published on

ಚಿಕ್ಕಬಳ್ಳಾಪುರ: ಜಾಗೃತಿ ಮತ್ತು ಅನುಷ್ಠಾನ ಚಟುವಟಿಕೆ  ದ್ವಿಗುಣಗೊಳಿಸಿ, ಸಾಕ್ಷರತೆಯಲ್ಲಿ ಪರಿಪೂರ್ಣ ಗುರಿಯನ್ನು ಸಾಧಿಸಲು ಶ್ರಮಿಸಬೇಕಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಕರೆ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಲೋಕಶಿಕ್ಷಣ ಸಮಿತಿ, ಡಿಎಸ್‌ಇಆರ್‌ಟಿ ಲೋಕಶಿಕ್ಷಣ ವಿಭಾಗಗಳ ವತಿಯಿಂದ  ಕೈಗೊಂಡಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ ವ್ಯವಹಾರದ ಶಿಸ್ತು, ಮಹಿಳಾ ಸಬಲೀಕರಣಕ್ಕೆ ಸಾಕ್ಷರತೆಯ ಪರಿಪೂರ್ಣ ಸಾಧನೆಯ ಅಗತ್ಯವಿದೆ. ಆರೋಗ್ಯ, ಲಿಂಗಸಮಾನತೆ, ಶಾಂತಿ, ಸುಸ್ಥಿರ ಅಭಿವೃದ್ಧಿಗಾಗಿ ಲಿಂಗಭೇದವಿಲ್ಲದೇ ಪ್ರತಿಯೊಂದು ವರ್ಗವು ಸಾಕ್ಷರತೆ ಮತ್ತು ಸಂಖ್ಯಾಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಮೊದಲು ಪುರುಷ ಮತ್ತು ಮಹಿಳಾ ಸಾಕ್ಷರತೆಯ ಪ್ರಮಾಣದ ನಡುವಿನ ಅಂತರವನ್ನು ಕಡಿಮೆಗೊಳಿಸಬೇಕಿದೆ. ಪಂಚಾಯಿತಿ ಪ್ರತಿನಿಧಿಗಳು ಸಾಕ್ಷರರಾಗಬೇಕಲ್ಲದೇ ಹಿಂದುಳಿದ ತಾಲ್ಲೂಕುಗಳಲ್ಲಿ ಆಯ್ದ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರ ಪಂಚಾಯಿತಿಗಳನ್ನಾಗಿಸಬೇಕಾಗಿದೆ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಮುನಿಕೆಂಪೇಗೌಡ ಮಾತನಾಡಿ, 15 ವರ್ಷ ಮತ್ತು ಮೇಲ್ಪಟ್ಟ ಎಲ್ಲರಿಗೂ ವಿಮರ್ಶಾತ್ಮಕ ಜೀವನಕೌಶಲಗಳ ತರಬೇತಿ ನೀಡುವುದು, ಆರ್ಥಿಕ ಮತ್ತು ಕಾನೂನಿನ ಸಾಕ್ಷರತೆ ಡಿಜಿಟಲ್ ಸಾಕ್ಷರತೆ, ವಿಪತ್ತು ನಿರ್ವಹಣೆ, ವಾಣಿಜ್ಯ ಮತ್ತು ಆರೋಗ್ಯ ಸುರಕ್ಷತೆ, ಶಿಕ್ಷಣ ಮತ್ತು ಕುಟುಂಬಕಲ್ಯಾಣಗಳಿಗಾಗಿ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ, ಇಲಾಖೆಯ ಅಧಿಕಾರಿಗಳಾದ  ರಾಮಾನುಜಂ,  ಲಕ್ಷ್ಮಿನಾರಾಯಣ್, ಶಿವಪ್ಪ, ಸುರೇಶ್, ಕಾರ್ಯಕ್ರಮ ಸಹಾಯಕ ಎಂ.ಮನು ಮತ್ತಿತರರು ಇದ್ದರು.

*ಪ್ರಮಾಣ ಪತ್ರಗಳ ವಿತರಣೆ*
ನವಸಾಕ್ಷರರಿಗೆ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಡಿಸಿ ವಿತರಿಸಿದರು. ಇದೇ ವೇಳೆ ಸಾಕ್ಷರತಾ ಕಾರ್ಯಕ್ರಮಗಳ ಕುರಿತಾದ ಭಿತ್ತಿಪತ್ರ ಮತ್ತು ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸಾಕ್ಷರತಾ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net