

ಬಾಳೆಹೊನ್ನೂರು: ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ 16ನೇ ವರ್ಷದ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ಸೋಮವಾರ ದುರ್ಗಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.
ನವರಾತ್ರಿಯ ಎಂಟನೇ ದಿನ ಆಶ್ವಯುಜ ಶುದ್ಧ ಸಪ್ತಮಿಯ ಮೂಲಾ ನಕ್ಷತ್ರದ ದಿನ ದುರ್ಗೆಯು ವಿಷ್ಣುರೂಪಿಣಿಯಾಗಿ, ಇಂದ್ರಾಣಿಯಾಗಿ ದೇವತೆಗಳಿಗೆ ದರ್ಶನ ನೀಡಿದ ದಿನವೆಂದು ಪುರಾಣದಲ್ಲಿ ಉಲ್ಲೇಖವಿದ್ದು, ಈ ದಿನ ಸರಸ್ವತಿ ಪೂಜಾ ದಿನವಾಗಿರುವುದದರಿಂದ ಪುಟ್ಟ ಮಕ್ಕಳಿಗೆ ಪ್ರಥಮವಾಗಿ ಅಕ್ಷರಾಭ್ಯಾಸ ಮಾಡಿಸಿದರೆ ಆ ಮಕ್ಕಳು ಸಿದ್ಧ, ಬುದ್ಧಿವಂತರಾಗಿ, ವಿದ್ಯಾಸಂಪನ್ನರಾಗಿ ಉತ್ತಮ ವ್ಯಕ್ತಿಗಳಾಗುತ್ತಾರೆ ಎಂಬ ನಂಬಿಕೆ ಇದೆ.
ಈ ಹಿನ್ನೆಲೆಯಲ್ಲಿ ವಿಶೇಷ ಅಕ್ಷರಾಭ್ಯಾಸ ಕಾರ್ಯ ನಡೆಸಿದ್ದು, ಒಂಬತ್ತು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಅಕ್ಷರಾಭ್ಯಾಸದ ಪ್ರಯುಕ್ತ ದೇವಿಯನ್ನು ಶಾರದಾ ಮಾತೆ ರೂಪದಲ್ಲಿ ವಿಶೇಷ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಹಾಗೂ ವೀಣಾಪಾಣಿ ಶಾರದಾ, ಮೋಹಿನಿ ರೂಪಿಣಿ ಪೂಜಾ ಪಾರಾಯಣ ನಡೆಸಲಾಯಿತು. ಅರ್ಚಕ ಸುಬ್ರಹ್ಮಣ್ಯಭಟ್ ಮತ್ತು ಸಂಗಡಿಗರು ಅಕ್ಷರಾಭ್ಯಾಸ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್, ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಖಜಾಂಚಿ ಭಾಸ್ಕರ್ ವೆನಿಲ್ಲಾ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಎಚ್.ಡಿ.ಸತೀಶ್, ಚೈತನ್ಯ ವೆಂಕಿ ಮತ್ತಿತರರು ಇದ್ದರು.