

ವಿಜಯವಾಣಿ ಸುದ್ದಿಜಾಲ ಉಡುಪಿ
ಹತ್ತು ವರ್ಷದ ಹಿಂದೆ ಪಾಡಿಗಾರ್ನಲ್ಲಿರುವ ತಮ್ಮ ಮಠದಲ್ಲಿಯೇ ಲೌಕಿಕ ವೈದಿಕ ಶಿಕ್ಷಣ ಪ್ರಾರಂಭಿಸಿದ್ದ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು, ಅನೇಕ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ಸಮಾಜಕ್ಕೆ ನೀಡುತ್ತಿದ್ದಾರೆ.
ವೈದಿಕ ಶೈಕ್ಷಣಿಕ ಅನುಭವದ ಪರಿಷ್ಕೃತ ರೂಪವಾಗಿ, ಅದಕ್ಕೆಂದೇ ಪ್ರತ್ಯೇಕವಾಗಿ ನಿರ್ಮಿಸಿದ ಭವ್ಯ ಕಟ್ಟಡದಲ್ಲಿ ಈ ವರ್ಷದಿಂದಲೇ ಎಲ್ಕೆಜಿಯಿಂದ ಎಸ್ಎಸ್ಎಲ್ಸಿ ವರೆಗಿನ ಶಿಕ್ಷಣ ನೀಡಲು ಶ್ರೀ ಸುಗುಣ ಸ್ಕೂಲ್ ಆರಂಭಿಸಿದ್ದಾರೆ. ತನ್ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲೂ ಸಹ ಹೊಸ ಹೆಜ್ಜೆ ಇಟ್ಟಿದ್ದಾರೆ.
ಶಾಲೆಯ ಆರಂಭದ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೋಮವಾರ ಬೆಳಗ್ಗೆ ಶ್ರೀವೇದವ್ಯಾಸ ಹಾಗೂ ದೇವರ ಪೂಜೆ ನೆರವೇರಿಸಿದ ಸುಗುಣೇಂದ್ರ ತೀರ್ಥರು, ಸರ್ವಜ್ಞ ಪೀಠದಿಂದಲೇ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಈ ಅಪೂರ್ವ ಸುಯೋಗ ಹೊಂದಿದ ಮಕ್ಕಳ ಪಾಲಕರು ಧನ್ಯತೆಯ ಭಾವ ವ್ಯಕ್ತಪಡಿಸಿದರು.
ಪುತ್ತಿಗೆ ಶ್ರೀಗಳು ಮಕ್ಕಳ ಕೈಹಿಡಿದು, ಶ್ರೀ ಗಣೇಶಾಯ ನಮಃ, ಶ್ರೀ ಕೃಷ್ಣಾಯ ನಮಃ ಎಂದು ಬರೆಯಿಸಿದರು. ಅಲ್ಲದೆ, ಆ ಮಕ್ಕಳಿಗೆ ಶಾಂತಿಮಂತ್ರ ಬೋಧಿಸಿ, ಶ್ರೀ ಸುಗುಣ ಪಾಠ ಶಾಲೆಗೆ ಶುಭ ಚಾಲನೆ ನೀಡಿದರು. ಕಿರಿಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಹಾಗೂ ಮಠದ ಶಿಷ್ಯರು ಇದ್ದರು.
ಆಧುನಿಕ ಶಿಕ್ಷಣದ ಭರಾಟೆ ನಡುವೆ ನಮ್ಮ ಸಂಸ್ಕೃತಿ ವಿನಾಶದತ್ತ ಮುಖ ಮಾಡಿದೆ. ಹೀಗಾಗಿ ಭಾರತೀಯ ಸನಾತನ ಸಂಸ್ಕೃತಿಯ ಪೋಷಣೆ ಹಾಗೂ ಆಧುನಿಕ ಶಿಕ್ಷಣ ಕಲಿಕೆಯ ಎರಡೂ ಪರಿಕಲ್ಪನೆ ಸಾಕಾರಗೊಳಿಸುವುದೇ ಶ್ರೀ ಸುಗುಣ ಸ್ಕೂಲ್ನ ಉದ್ದೇಶವಾಗಿದೆ. ಎಲ್ಲ ಹೊಸ ಬಗೆಯ ಶಿಕ್ಷಣದೊಂದಿಗೆ ಮಕ್ಕಳಿಗೆ ನಮ್ಮತನ ರೂಢಿಸಬೇಕೆನ್ನುವುದು ನಮ್ಮ ಆಶಯವೂ ಆಗಿದೆ.
ಸುಗುಣೇಂದ್ರ ತೀರ್ಥ ಶ್ರೀಪಾದರು.ಪರ್ಯಾಯ ಪುತ್ತಿಗೆ ಮಠ, ಉಡುಪಿ