ಬಂಡಳ್ಳಿ ಸರ್ಕಾರಿ ಶಾಲೆಯಲ್ಲಿ ಅಕ್ಷರಾಭ್ಯಾಸ

23 HANUR 3
ಬಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಪಾಲಕರ ಮಡಿಲಿನಲ್ಲಿ ಅಕ್ಷರಾಭ್ಯಾಸ ನಡೆಯಿತು. ಪುಟ್ಟದೇವಮ್ಮ, ಗುರುಸ್ವಾಮಿ, ಶಿಕ್ಷಕರು ಹಾಗೂ ಪಾಲಕರು ಇದ್ದರು.
Published on

ಹನೂರು : ಶೈಕ್ಷಣಿಕ ವಲಯದ ಬಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಸೋಮವಾರ ಪಾಲಕರ ಮಡಿಲಿನಲ್ಲಿ ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕ ಗುರುಸ್ವಾಮಿ ಹಾಗೂ ಶಿಕ್ಷಕರ ತಂಡ ಶಾಲಾವರಣದಲ್ಲಿ ಅಗತ್ಯ ಸಿದ್ಧತೆ ಕೈಗೊಂಡಿತ್ತು. ಆಗಮಿಸಿದ್ದ ಪಾಲಕರು ಉತ್ಸಾಹದಿಂದ ತಮ್ಮ ಮಕ್ಕಳೊಡನೆ ಕುಳಿತು ತಟ್ಟೆಯಲ್ಲಿ ಅಕ್ಕಿ ಇಟ್ಟು ಅರಿಸಿಣ, ಕುಂಕುಮ ಹಚ್ಚುವುದರ ಮೂಲಕ ಪುಟಾಣಿಗಳ ಬೆರಳ ತುದಿಯಿಂದ ಓಂ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಿದರು. ಮಕ್ಕಳ ಕಲಿಕೆಯ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಶಿಕ್ಷಕರ ಕಾಳಜಿಯ ಬಗ್ಗೆ ಎಸ್‌ಡಿಎಂಸಿ ಅಧ್ಯಕ್ಷೆ ಪುಟ್ಟದೇವಮ್ಮ ಹಾಗೂ ನೆರೆದಿದ್ದ ಗ್ರಾಮಸ್ಥರಲ್ಲಿ ಮೆಚ್ಚುಗೆ ವ್ಯಕ್ತವಾಯಿತು.

ಪಾಲಕ, ಶಿಕ್ಷಕರ ಸಭೆ: ಬಳಿಕ ಶಾಲೆಯಲ್ಲಿ ಆಯೋಜಿಸಿದ್ಧ ಪಾಲಕ, ಶಿಕ್ಷಕರ ಸಭೆಯನ್ನು ಎಸ್‌ಡಿಎಂಸಿ ಅಧ್ಯಕ್ಷೆ ಪುಟ್ಟದೇವಮ್ಮ ಅವರು ಬಲೂಲನ್ನು ಹಾರಿ ಬಿಡುವುದರ ಮೂಲಕ ಉದ್ಘಾಟಿಸಿದರು. ಶಾಲೆಯಲ್ಲಿ ಮುಖ್ಯ ಶಿಕ್ಷಕ ಗುರುಸ್ವಾಮಿ ಹಾಗೂ ಶಿಕ್ಷಕರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪಾಲಕರು ಹಾಗೂ ಗ್ರಾಮಸ್ಥರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಫಲವಾಗಿ ಈ ಬಾರಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿರುವುದೇ ಸಾಕ್ಷಿಯಾಗಿದೆ. ಇಲ್ಲಿನ ಶಿಕ್ಷಕರು ಮಕ್ಕಳ ಕಲಿಕೆಯ ಬಗ್ಗೆ ಹೊಂದಿರುವ ಕಾಳಜಿಯಿಂದ ಶಾಲೆ ಅಭಿವೃದ್ಧಿಯತ್ತ ಸಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ಪಾಲಕರು ನಮ್ಮ ಶಾಲೆ, ನಮ್ಮ ಹೆಮ್ಮೆ ಎಂಬ ಭಾವನೆಯನ್ನು ಹೊಂದಿ ಸಂಪೂರ್ಣ ಸಹಕಾರ ನೀಡುವುದರ ಮೂಲಕ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.

ಶೌಚಗೃಹ ಪೂರ್ಣಕ್ಕೆ ಒತ್ತಾಯ: ಸಭೆಯಲ್ಲಿ ಪಾಲಕರು ಮಾತನಾಡಿ, ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲೆಯಲ್ಲಿ ಹೆಚ್ಚಿನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಶೌಚಗೃಹದ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ಮಕ್ಕಳು ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ. ಈ ಬಗ್ಗೆ ಶಿಕ್ಷಕರು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ. ಆದರೆ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಶೌಚಗೃಹದ ಕಾಮಗಾರಿಯನ್ನು ಪೂರ್ಣಗೊಳಿಸುವುದರ ಮೂಲಕ ಮಕ್ಕಳಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು.

ಇನ್ನು ಸಭೆಯಲ್ಲಿ ಶಾಲೆಯಲ್ಲಿ ಸಮಯ ಪಾಲನೆ, ಸ್ವಚ್ಛತೆ, ಸಮವಸ್ತ್ರ ಧರಿಸುವಿಕೆ, ಮಕ್ಕಳ ಕಲಿಕೆ, ಮಕ್ಕಳು ಹಾಗೂ ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಹಾಗೂ ಇನ್ನಿತರೆ ಶೈಕ್ಷಣಿಕ ವಿಚಾರ ಕುರಿತು ಚರ್ಚಿಸಲಾಯಿತು.

ಮುಖ್ಯ ಶಿಕ್ಷಕ ಗುರುಸ್ವಾಮಿ, ಶಿಕ್ಷಕರಾದ ಮಾಲತಿ, ಪ್ರದೀಪ್‌ಕುಮಾರ್, ಸುನೀತಾ, ಜವೇರಿಯ ಅತ್ತರ್, ಶಾಂತಮ್ಮ, ರೂಪದೇವಿ, ರಶ್ಮಿ, ಶ್ವೇತಾ, ಸಿದ್ದರಾಜು, ಪುಟ್ಟಸ್ವಾಮಿ, ಪಾಲಕರಾದ ಅಬ್ದುಲ್ ರಜಾಕ್, ಮುನೀರ್, ಅಸೀಫ್, ಸೌಮ್ಯ, ಸಿದ್ದರಾಜಿ, ವಾಣಿಶ್ರೀ, ಮಂಗಳಮ್ಮ, ಸೌಮ್ಯಶ್ರೀ ಹಾಗೂ ಇನ್ನಿತರರು ಇ?ದ್ದರು.

ಮಾದರಿಯಾದ ಶಿಕ್ಷಕಿ

ಈ ಶಾಲೆಗೆ ಕಳೆದ 15 ವರ್ಷದಿಂದಲೂ ಮುಸ್ಲಿಂ ಸಮುದಾಯದ ಮಕ್ಕಳು ದಾಖಲಾಗುತ್ತಿರಲಿಲ್ಲ. ಇದನ್ನು ಮನಗಂಡ ಶಾಲೆಯ ಶಿಕ್ಷಕಿ ಜವೇರಿಯ ಅತ್ತರ್ ಅವರು ಖಾಸಗಿ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಮಕ್ಕಳಾದ ಆಯಿರ ಸುಜೈನ್ 4ನೇ ತರಗತಿಗೆ ಹಾಗೂ ಆಯೇಷಾ ಸುಜೈನ್‌ನನ್ನು ಯುಕೆಜಿಗೆ ಈ ವರ್ಷ ಇದೇ ಶಾಲೆಗೆ ದಾಖಲು ಮಾಡುವುದರ ಮೂಲಕ ಮಾದರಿ ಶಿಕ್ಷಕಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net