

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಸತ್ತೂರಿನ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಮಕ್ಕಳ ಅಕ್ಷರಾಭ್ಯಾಸ ಹಾಗೂ ವಿದ್ಯಾರಂಭ ಕಾರ್ಯಕ್ರಮವನ್ನು ಭಾನುವಾರ ಜರುಗಿತು.
ಹಗರಿಬೊಮ್ಮನಹಳ್ಳಿ ಹಂಪಸಾಗರದ ಶ್ರೀ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವಲ್ಲಿ ರಾಷ್ಟ್ರೊತ್ಥಾನ ಮುಂಚೂಣಿಯಲ್ಲಿದೆ. ಇಂತಹ ಶಾಲೆಯಲ್ಲಿ ಪ್ರವೇಶ ಪಡೆದ ಮಕ್ಕಳು ಪುಣ್ಯವಂತರು ಶಾಲೆ, ಪಾಲಕರ ಗೌರವ ಉಳಿಸುವ ಕೆಲಸ ಮಾಡಬೇಕು ಎಂದರು.
ನಂತರ ಸಾಂಪ್ರದಾಯ ಬದ್ಧವಾಗಿ ಮಕ್ಕಳಿಗೆ ಓಂ ಅಕ್ಷರ ಬರೆಸಿಯಿಸಿ, ಓಂ ಅಕ್ಷರದ ಮಹತ್ವ ತಿಳಿಸಿದ ಅವರು, ಮಕ್ಕಳಿಗೆ ಪ್ರತಿಯೊಂದು ಹಂತದಲ್ಲಿ ಕೊಡಬೇಕಾದ ಸಂಸ್ಕಾರದ ಮಾಹಿತಿ ನೀಡಿ ಶುಭ ಹಾರೈಸಿದರು.
ಸಂಸ್ಥೆಯ ಕರೆಸ್ಪಾಂಡೆಂಟ್ ಗುರುರಾಜ ಅಗಡಿ ಮಾತನಾಡಿ, ಮಕ್ಕಳಲ್ಲಿ ಶಿಕ್ಷಣದ ಜತೆಗೆ ರಾಷ್ಟ್ರ ಭಕ್ತಿ ಬೆಳೆಸಬೇಕು ಎಂದ ಅವರು, ರಾಷ್ಟ್ರೊತ್ಥಾನ ಪರಿಷತ್ ಸಲ್ಲಿಸುತ್ತಿರುವ ಸೇವೆ ತಿಳಿಸಿದರು.
ವಿದ್ಯಾ ಕೇಂದ್ರದ ಪ್ರಧಾನಾಚಾರ್ಯ ರಾಮಕೃಷ್ಣ ಸ್ವಾಗತಿಸಿದರು. ಲಲಿತಾ ಹೆಬ್ಬಾರ್ ನಿರೂಪಿಸಿದರು. ಕಾವಶ್ರೀ ವಂದಿಸಿದರು.