

ಬ್ಯಾಡಗಿ: ಯಾವುದನ್ನು ತಿಳಿದುಕೊಂಡರೆ ದುಃಖ ಹೋಗಲಿದೆಯೋ ಅದನ್ನು ಜ್ಞಾನ ಎನ್ನಲಾಗಿದೆ. ಸುಖ ದುಃಖ ಸಮಾಂತರವಾಗಿದ್ದಲ್ಲಿ ಜೀವನ ಸಂತಸಮಯವಾಗಲಿದೆ ಎಂದು ಕೊಪ್ಪಳ ಗವಿಸಿದ್ಧೇಶ್ವರ ಶ್ರೀಗಳು ತಿಳಿಸಿದರು.
ಇಲ್ಲಿನ ಎಸ್ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿರುವ ಎರಡನೇ ದಿನದ ಪ್ರವಚನ ಕಾರ್ಯಕ್ರಮ ಹಾಗೂ ಸದ್ಭಾವನಾ ಪಾದಯಾತ್ರೆ ನೇತೃತ್ವ ವಹಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬುದ್ಧ ಬಸವಣ್ಣರಂತಹ ಶರಣರು ಮನಸಿನ ಹೊಲಸು ತೊಳೆಯಲು ಶತಮಾನಗಳ ಕಾಲ ಶ್ರಮಿಸಿದರು. ಅವರ್ಯಾರೂ ಕುಲ, ಪಂಥ ಹಾಗೂ ಧರ್ಮಗಳ ವ್ಯಾಪ್ತಿಗೆ ಸೇರಿರಲಿಲ್ಲ. ಅಂತಹ ಪುಣ್ಯಾತ್ಮರನ್ನು ಒಂದೆಡೆ ನಿಲ್ಲಿಸಿದ್ದೇವೆ. ಮಹಾತ್ಮರ ತತ್ವಾದರ್ಶ ಹಾಗೂ ನಡೆನುಡಿಗಳನ್ನು ಪಾಲಿಸದೆ ಮೂಲ ಧ್ಯೇಯಗಳನ್ನು ಮರೆತಿದ್ದೇವೆ. 12ನೇ ಶತಮಾನದ ಶರಣರು ಒಬ್ಬೊಬ್ಬರು ಒಂದೊಂದು ಕಸುಬಿನ ಕಾಯಕ ಮಾಡುತ್ತ ಅನುಭವ ಮಂಟಪದಲ್ಲಿ ಗುರುಶಿಷ್ಯರಾಗಿ ಜ್ಞಾನಾಮೃತವನ್ನು ಸವಿಯುತ್ತಿದ್ದರು. ಭೇದ-ಭಾವ ಇಲ್ಲದೆ ಪ್ರಸಾದ ಸ್ವೀಕರಿಸಿ ಭಾವೈಕ್ಯದ ಸಮಾಜ ನಿರ್ವಿುಸಿದ್ದರು. ಕಲ್ಮಶವಾಗಿರುವ ಮನಸಿನ ಸ್ವಚ್ಛತೆಗೆ ಶರಣ ಸಂತರು, ಸತ್ಪುರುಷರು, ವಚನ ಸಾಹಿತ್ಯ ರಚಿಸಿದ್ದು, ಅವನ್ನು ಅಧ್ಯಯನ ಮಾಡಿದರೆ ಪಾಪ ದೂರವಾಗಿ ಮನದ ತಾಪ ಇಲ್ಲವಾಗಲಿದೆ. ಶರಣರ ಸಂದೇಶ, ಮಾತು ಕೇಳಿಸಿಕೊಂಡಲ್ಲಿ ಜನ್ಮ ಪಾವನವಾಗಲಿದೆ. ಸತ್ಸಂಗದಿಂದ ಆದರ್ಶ, ಮೌಲ್ಯಗಳು ಜೊತೆಗೂಡಲಿವೆ. ಸಜ್ಜನರ ಸಂಗದ ಪ್ರಭಾವದಿಂದ ಶರಣರ ಪ್ರವಚನ ಆಲಿಸುವುದರಿಂದ ಮನಸಿನ ಪಾಪ, ತಾಪಗಳು ದೂರವಾಗಲಿವೆ ಎಂದರು.
ಹೂವಿನ ಹಡಗಲಿ ಮಠದ ಡಾ.ಹಿರಿಶಾಂತ ಶ್ರೀಗಳು, ಬಳಗಾನೂರಿನ ಶಿವಶಾಂತವೀರ ಶರಣರು, ಸಂಗಣ್ಣ ಗಡಗಿ, ಕುಮಾರೇಶ್ವರ ಪಾಠಶಾಲೆಯ ವ್ಯವಸ್ಥಾಪಕ ರಾಚಯ್ಯಸ್ವಾಮಿ ಓದಿಸೋಮಠ, ಪಾಠಶಾಲೆಯ ವಟುಗಳು, ಭಕ್ತರು ಇದ್ದರು.
ನ. 16ರಂದು ಬ್ಯಾಡಗಿ ಹಾವೇರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಯೋಧರ ಭವನದಿಂದ ಸದ್ಭಾವನಾ ಪಾದಯಾತ್ರೆ ಆರಂಭವಾಗಿ ಸುಭಾಸ ನಗರ ಒಳಭಾಗದ ಮೂಲಕ ತೆರಳಿ ನೆಹರು ನಗರದ ದಾನಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜಾಗೃತ ಸಂದೇಶ ನೀಡಲಾಗುವುದು.