

ರಟ್ಟಿಹಳ್ಳಿ: ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಥೆಗಳು, ಶರಣರ, ದಾರ್ಶನಿಕರ ಜೀವನ ಚರಿತ್ರೆ ಮತ್ತು ಸಂದೇಶ ಆಲಿಸುವುದರಿಂದ ಆತ್ಮವಿಶ್ವಾಸ, ನೆಮ್ಮದಿ ಮತ್ತು ಸಂತೋಷ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಪ್ಪಾಯಿಕೊಪ್ಪದ ಶ್ರೀಗುರು ಮೂಕಪ್ಪ ಶಿವಯೋಗಿಗಳ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಕುಡುಪಲಿ ಗ್ರಾಮದ ಶ್ರೀ ಶರಣಬಸವೇಶ್ವರ, ಶ್ರೀ ವೀರಮಹೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಶರಣಬಸವೇಶ್ವರರ 48ನೇ ವರ್ಷದ ಪುರಾಣ ಮಂಗಲ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಸ್ವಾರ್ಥ ತೊರೆಯಬೇಕು. ಸಂಬಂಧಗಳ ಬೆಲೆ, ಕುಟುಂಬದ ಮೌಲ್ಯ ಅರ್ಥ ಮಾಡಿಕೊಳ್ಳಬೇಕು, ದೇವಸ್ಥಾನಗಳು ಆಧ್ಯಾತ್ಮಿಕ, ಭಕ್ತಿಯ ಚಿಂತನೆಗಳ ಮೂಲಕ ಮನಸಿಗೆ ನಮ್ಮದಿ ನೀಡುವ ಪವಿತ್ರ ಸ್ಥಳಗಳಾಗಿವೆ. ಪ್ರೀತಿ, ವಿಶ್ವಾಸ, ನಂಬಿಕೆಯ ತಳಹದಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು. ಪರಸ್ಪರ ಪ್ರೀತಿಯಿಂದ ಸಮಾಜಕ್ಕೆ ಸನ್ಮಾರ್ಗ ತೋರಬೇಕು. ಕಷ್ಟಕಾರ್ಪಣ್ಯಗಳನ್ನು ಧೈರ್ಯದಿಂದ ಎದುರಿಸಿ ಜೀವನ ಸಾಗಿಸಬೇಕು ಎಂದರು.
ಉಕ್ಕಡಗಾತ್ರಿಯ ಕೆ.ಎನ್. ಗದಿಗಯ್ಯ ಶಾಸಿಗಳು ಪುರಾಣ ಪ್ರವಚನ ನಡೆಸಿಕೊಟ್ಟರು. ಸರ್ವಂದದ ಮಾದೇವಪ್ಪ ಎಳೆಹೊಳೆ, ಗಣೇಶ ಬಡಿಗೇರ ಸಾಥ್ ನೀಡಿದರು.
ಷಡಕ್ಷರಯ್ಯ ಮಠದ, ಹೇಮಯ್ಯ ಬೆಲ್ಲದ, ಸಿದ್ದಲಿಂಗಸ್ವಾಮಿ ಹಿರೇಮಠ, ಮಂಜುಸ್ವಾಮಿ ಮಠದ, ಪ್ರಭಯ್ಯ ಉಕ್ಕಡಗಾತ್ರಿಮಠ, ಕಮಿಟಿ ಚೇರ್ಮನ್ ಸಿದ್ದಣ್ಣ ಹಲಗೇರಿ, ನಿವೃತ್ತ ಶಿಕ್ಷಕ ಎಸ್.ಜಿ. ಮಠದ, ವಿರೂಪಾಕ್ಷಯ್ಯಸ್ವಾಮಿ, ಭರಮಗೌಡ ಪಾಟೀಲ, ಬಸಣ್ಣ ಉಪ್ಪಿನ, ಜಯಪ್ಪ ಕುಸಗೂರು ಭಜನಾ ಮಂಡಳಿ ಮತ್ತು ಮಠದ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.