

ಉಪ್ಪಿನಬೆಟಗೇರಿ: ಶರಣರು ಹೇಳುವ ಪಾಠ, ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ನಿಜವಾದ ಆನಂದ ದೊರಕುತ್ತದೆ ಎಂದು ಖೇಡಗಿಯ ಪ್ರಭು ದೇವರು ಹೇಳಿದರು.
ಸ್ಥಳೀಯ ಜಗದ್ಗುರು ಮೂರುಸಾವಿರ ವಿರಕ್ತಮಠದಲ್ಲಿ ಶ್ರಾವಣದ ಅಧಿಕ ಮಾಸದ ಅಂಗವಾಗಿ ಮಂಗಳವಾರದಿಂದ ಪ್ರಾರಂಭವಾದ ನಲ್ವತವಾಡದ ಶ್ರೀ ವೀರೇಶ್ವರ ಶರಣರ ಪುರಾಣ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು. ಶ್ರಾವಣ ಮಾಸದ ಅಧಿಕ ತಿಂಗಳಲ್ಲಿ ಮಹಾಪುರುಷರ ಜೀವನ ಚರಿತ್ರೆಯನ್ನು ಭಕ್ತಿ ಭಾವದಿಂದ ಆಲಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವತ್ತ ಗಮನಹರಿಸಬೇಕು. ಜೊತೆಗೆ ಈ ಮಾಸದಲ್ಲಿ ಪವಿತ್ರ ಕ್ಷೇತ್ರಗಳ ದರ್ಶನ ಮಾಡಿದರೆ ಅಧಿಕ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಸಾನ್ನಿಧ್ಯವಹಿಸಿದ್ದ ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಆಶೀರ್ವಚನ ನೀಡಿ, ಒಂದು ಲಕ್ಷ ಜಪ ಯಜ್ಞ ಮಾಡಿದಷ್ಟು ಪುಣ್ಯ ಶ್ರಾವಣ ಮಾಸದ ಅಧಿಕ ತಿಂಗಳಲ್ಲಿ ದೊರೆಯುತ್ತದೆ. ಪ್ರವಚನ ಹೇಳುವುದನ್ನು ಭಕ್ತಿಯಿಂದ ಆಲಿಸಿದರೆ ಮನಸಿನಲ್ಲಿರುವ ಕೆಟ್ಟ ಆಲೋಚನೆಗಳು ದೂರವಾಗಿ ಮನಶಾಂತಿ ಲಭಿಸುತ್ತದೆ ಎಂದರು.
ನಲ್ವತವಾಡದ ಶ್ರೀ ವೀರೇಶ್ವರ ಶರಣರ ಪುರಾಣ ಪ್ರವಚನ ಒಂದು ತಿಂಗಳು ಶ್ರೀಮಠದ ಆವರಣದಲ್ಲಿ ಜರುಗಲಿದ್ದು, ಭಕ್ತರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಆಗಮಿಸಿ ಶ್ರದ್ಧೆಯಿಂದ ಪಾಲ್ಗೊಳ್ಳುವ ಮೂಲಕ ಅಧಿಕ ಮಾಸದ ಪ್ರಯೋಜನ ಪಡೆದು ಕೃತಾರ್ಥರಾಗಿ ಎಂದರು.
ಉಭಯ ಶ್ರೀಗಳು ಹಾಗೂ ಗ್ರಾಮಸ್ಥರು ಜ್ಯೋತಿ ಬೆಳಗುವ ಮೂಲಕ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಫಕೀರಪ್ಪ ಮಡಿವಾಳರ, ಬಸವರಾಜ ಮಸೂತಿ, ಮಹಾಲಿಂಗಪ್ಪ ಆಯಟ್ಟಿ, ಗಂಗಪ್ಪ ತಳವಾರ, ದ್ಯಾಮಣ್ಣ ಹಳಮನಿ, ರುದ್ರಯ್ಯ ಕಾಶೀಮಠ, ಸಾತಪ್ಪ ಬೀಡಿ ಹಾಗೂ ಉಪ್ಪಿನಬೆಟಗೇರಿ, ಹನುಮನಕೊಪ್ಪ ಗ್ರಾಮಸ್ಥರು ಉಪಸ್ಥಿತರಿದ್ದರು.