ನಿಂಬೆ ಬೆಳಗಾರರ ಸಂಕಷ್ಟ ಆಲಿಸಿ-ಪರಿಹಾರ ಕಲ್ಪಿಸಿ; ಸಿಎಂ ಸಿದ್ದರಾಮಯ್ಯಗೆ ರೈತ ಮುಖಂಡ ಪಂಚಪ್ಪ ಕಲಬುರಗಿ ಆಗ್ರಹ

PANCHAPPA KALABURGI PRESS MEET
ವಿಜಯಪುರ ನಗರದ ಕಸಾಪ ಸಭಾಭವನದಲ್ಲಿ ರೈತ ಮುಖಂಡ ಪಂಚಪ್ಪ ಕಲಬುರಗಿ ಸುದ್ದಿಗೋಷ್ಠಿ ನಡೆಸಿದರು. ರೈತರಾದ ಭೀಮಾಶಂಕರ ಹಂಜಗಿ, ಶ್ರೀಶೈಲ ಬಿರಾದಾರ, ಪ್ರಕಾಶ ಹೊಟಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಿಂಬೆ ನಾಡಿಗೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ರಾಜ್ಯದ ಏಕೈಕ ನಿಂಬೆ ಅಭಿವೃದ್ಧಿ ಮಂಡಳಿಗೆ ಅನುದಾನ ನೀಡುವುದರ ಜೊತೆಗೆ ಸಂಕಷ್ಟದಲ್ಲಿರುವ ನಿಂಬೆ ಬೆಳೆಗಾರರಿಗೆ ಜೂನ್‌ನಿಂದ ಡಿಸೆಂಬರ್‌ವರೆಗೆ ಬೆಂಬಲ ಬೆಲೆ ಯೋಜನೆಯಡಿ ನಿಂಬೆ ಖರೀದಿಸಬೇಕೆಂದು ರೈತ ಮುಖಂಡ ಪಂಚಪ್ಪ ಕಲಬುರಗಿ ಆಗ್ರಹಿಸಿದರು.

ಜು. 14 ರಂದು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಲೋಕಾರ್ಪಣೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಇಂಡಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಿಂಬೆ ಬೆಳೆಗಾರರ ಸಮಸ್ಯೆ ಆಲಿಸಬೇಕು. ಜಿಲ್ಲೆಯ ಕಾಗಜಿ ತಳಿಯ ನಿಂಬೆ ಬೆಳೆಗೆ 150 ವರ್ಷಗಳ ಇತಿಹಾಸವಿದೆ. ಜಿಲ್ಲೆಯೊಂದರಲ್ಲಿಯೇ 10564 ನಿಂಬೆ ಬೆಳೆಗಾರರು ಇದ್ದು, 8224 ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯಲಾಗುತ್ತದೆ. ಶೇ. 80ರಷ್ಟು ನಿಂಬೆ ಜಿಲ್ಲೆಯೊಂದರಲ್ಲಿಯೇ ಬೆಳೆಯಲಾಗುತ್ತಿದೆ. ಆದರೆ, ನಿಂಬೆ ಬೆಳೆಗಾರರು ನಷ್ಟದಲ್ಲಿದ್ದು ಸರ್ಕಾರ ನೆರವಿಗೆ ಧಾವಿಸಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.

ಶಾಸಕ ಯಶವಂತರಾಯಗೌಡ ಪಾಟೀಲರ ಹೋರಾಟ ಹಾಗೂ ಪರಿಶ್ರಮದ ಫಲವಾಗಿ ನಿಂಬೆ ಅಭಿವೃದ್ಧಿ ಮಂಡಳಿ ರಚನೆಯಾಗಿದೆ. ಆದರೆ, ಮಂಡಳಿಯಿಂದ ಈವರೆಗೂ ಕೆಜಿ ನಿಂಬೆ ಖರೀದಿಯಾಗಿಲ್ಲ. ಅನುದಾನವಿಲ್ಲದೆ ಮಂಡಳಿ ಅಸ್ಥಿಪಂಜರದಂತೆ ಗೋಚರಿಸುತ್ತಿದೆ. ಜೂನ್ ತಿಂಗಳಿನಿಂದ ಡಿಸೆಂಬರ್‌ವರೆಗೆ ನಿಂಬೆಗೆ ಬೆಲೆಯೇ ಇರುವುದಿಲ್ಲ. ಈ ಸಂದರ್ಭ ಕನಿಷ್ಠ 4 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡುವ ಮೂಲಕ ನಿಂಬೆ ಖರೀದಿಸಬೇಕೆಂದು ಪಂಚಪ್ಪ ಒತ್ತಾಯಿಸಿದರು.

ಪ್ರಸ್ತುತ ನಿಂಬೆ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. 15 ವರ್ಷಗಳಿಂದ ಬಡವರಿಗೆ ಉಚಿತ ಯೋಜನೆಗಳಿಂದ ಕೂಲಿಗಾರರು ಸಿಗುತ್ತಿಲ್ಲ. ರೈತರು ಸರ್ಕಾರದ ನರೇಗಾ ಯೋಜನೆಯ ಕೂಲಿಗಿಂತ ಅಧಿಕ ಹಣ ಕೊಡುತ್ತೇವೆ. ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾಗುತ್ತದೆ. ರೈತರು ಪ್ರತಿ ವಾರಕ್ಕೆ ಕೂಲಿ ಹಣ ನೀಡುತ್ತಾರೆ. ಆದರೂ, ಕೂಲಿ ಕಾರ್ಮಿಕರು ಸಿಗುತ್ತಿಲ್ಲ. 100 ಕೋಟಿ ಜನರು ನಿಂಬೆ ಬಳಕೆ ಮಾಡುತ್ತಾರೆ. ಹೀಗಾಗಿ ನಿಂಬೆ ಸಂಸ್ಕರಣ ಘಟಕಗಳನ್ನು ಸ್ಥಾಪಿಸಿದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ನಿಂಬೆ ಅಭಿವೃದ್ಧಿ ಮಂಡಳಿಗೆ ಕನಿಷ್ಠ 100 ಕೋಟಿಯಾದರೂ ಅನುದಾನ ಒದಗಿಸಿ. ಜಾಗತಿಕವಾಗಿ ಮಾರುಕಟ್ಟೆ ವಿಸ್ತರಿಸಿ. ದಲ್ಲಾಳಿಗಳು ಶೇ.10 ರಷ್ಟು ಕಮೀಷನ್ ಪಡೆಯುತ್ತಿದ್ದು, ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಅದನ್ನು ತಪ್ಪಿಸಬೇಕು. ಆ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.

ರೈತರಾದ ಭೀಮಾಶಂಕರ ಹಂಜಗಿ, ಶ್ರೀಶೈಲ ಬಿರಾದಾರ, ಪ್ರಕಾಶ ಹೊಟಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net