ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಪರಿಹರಿಸಿ: ಕರಾಮುವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಸೂಚನೆ

mysore
Published on

ಮೈಸೂರು: ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಅವುಗಳನ್ನು ಬಗೆಹರಿಸಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅಧಿಕಾರಿಗಳಿಗೆ ಸೂಚಿಸಿದರು.


ಮುಕ್ತಗಂಗೋತ್ರಿಯಲ್ಲಿರುವ ಕರಾಮುವಿ ಕಲಿಕಾರ್ಥಿ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ಮಾರ್ಗದರ್ಶಿ ಮತ್ತು ವಿದ್ಯಾರ್ಥಿ-ಅಧಿಕಾರಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.


ಬೀದರ್‌ನಿಂದ ಚಾಮರಾಜನಗರದವರೆಗೆ ಇಡೀ ರಾಜ್ಯವ್ಯಾಪಿ ಕಾರ್ಯಕ್ಷೇತ್ರವನ್ನು ವಿವಿ ಹೊಂದಿದೆ. ದೂರದ ಊರಿನಿಂದ ವಿದ್ಯಾರ್ಥಿಗಳು ಕೇಂದ್ರ ಸ್ಥಾನಕ್ಕೆ ಬರಬೇಕಾದರೆ 3-4ದಿನಗಳು ಬೇಕಾಗುತ್ತದೆ. ಇದನ್ನು ತಪ್ಪಿಸಲೆಂದೆ ಈ ಕೇಂದ್ರ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಹೇಳಿದರು.


ವಿದ್ಯಾರ್ಥಿಗಳಿಗೆ ಪ್ರವೇಶಾತಿ, ಅಂಕಪಟ್ಟಿ, ಪದವಿ ಪ್ರಮಾಣಪತ್ರ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿರುತ್ತವೆ. ಅವರು ಕರೆ ಮಾಡಿದಾಗ ಮಾಹಿತಿ ಒದಗಿಸುವುದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಸಿಬ್ಬಂದಿ ಕೆಲಸ ಮಾಡಬೇಕು ಎಂದರು.


ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಕಲಿಕಾರ್ಥಿ ಕಲ್ಯಾಣ ಕೇಂದ್ರ ತೆರೆದು, ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದೆ. ಇದನ್ನು ಸಿಬ್ಬಂದಿ ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಬೇಕು. ಸಮಸ್ಯೆಗಳೇ ಇಲ್ಲದಂತೆ ಕಾರ್ಯನಿರ್ವಹಿಸಬೇಕು. ಎಲ್ಲ ನೌಕರರು ಸಾಂಘಿಕವಾಗಿ ಕೆಲಸ ಮಾಡಬೇಕು. ಯಾವುದೇ ಅಪಸ್ವರ ಬಾರದಂತೆ ನೋಡಿಕೊಳ್ಳಬೇಕು. ವಿವಿಯು ಪ್ರಗತಿಪಥದಲ್ಲಿ ಸಾಗಬೇಕು ಎಂದರು.


ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ ಮಾತನಾಡಿ, ಸಾಮಾನ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆ, ಸಿದ್ಧಪಾಠ, ಪ್ರವೇಶ, ಆಂತರಿಕ ಅಂಕಗಳು ಮತ್ತಿತರ ಮಾಹಿತಿ ಕೇಳುತ್ತಾರೆ. ಡಿಜಿಟಲ್ ಲರ್ನಿಂಗ್ ಆ್ಯಪ್ ಬಗ್ಗೆ ಕೂಡ ಕೇಳುತ್ತಾರೆ. ವಿದ್ಯಾರ್ಥಿಗಳಿಗೆ ಆತಂಕ ಇರುತ್ತದೆ. ಅದನ್ನು ಹೋಗಲಾಡಿಸುವಂತೆ ನೀವು ಉತ್ತರಿಸಬೇಕು. ಸಂಬಂಧಪಟ್ಟವರಿಂದ ಮಾಹಿತಿ ಪಡೆದು ವಿದ್ಯಾರ್ಥಿಗಳಿಗೆ ನೀಡಬೇಕು ಎಂದರು.


ಕಲಿಕಾರ್ಥಿ ಕಲ್ಯಾಣ ಕೇಂದ್ರದ ಸಿಬ್ಬಂದಿ ಸಕ್ರಿಯವಾಗಿ ಕೆಲಸ ಮಾಡಬೇಕು. ಇದೊಂದು ಸಂವಹನ ಪ್ರಕ್ರಿಯೆ. ವಿದ್ಯಾರ್ಥಿಗಳಿಂದ ಬರುವ ಪ್ರತಿಯೊಂದು ಕರೆಯನ್ನು ಸ್ವೀಕರಿಸಬೇಕು. ಕರೆ ಕಡಿತವಾದರೆ, ಮಿಸ್ಡ್ ಕಾಲ್ ಇದ್ದರೆ ಮರು ಕರೆ ಮಾಡಬೇಕು. ಅತ್ಯಂತ ತಾಳ್ಮೆಯಿಂದ ಉತ್ತರಿಸಬೇಕು ಎಂದು ಸೂಚಿಸಿದರು.


ವಿವಿ ಅಧ್ಯಯನ ಕೇಂದ್ರಗಳ ಡೀನ್ ಪ್ರೊ.ರಾಮನಾಥ್ ನಾಯ್ಡು, ಪರೀಕ್ಷಾ ವಿಭಾಗದ ಉಪ ಕುಲಸಚಿವ ಸತೀಶ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕೇಂದ್ರದ ಸಂಯೋಜಕ ಡಾ.ಸುಧಾಕರ ಹೊಸಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net