

ಕೊಳ್ಳೇಗಾಲ: ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಗ್ರಾಮ ಘಟಕಗಳ ರೈತರು ತಮ್ಮ ಭಾಗದಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಜಿಲ್ಲಾ ಘಟಕಕ್ಕೆ ಸಲ್ಲಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದರು.
ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಮ ಘಟಕದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ನೀರಾವರಿ ಯೋಜನೆ, ವಿದ್ಯುತ್, ಕಾಡು ಪ್ರಾಣಿಗಳ ಹಾವಳಿ ಇನ್ನಿತರ ಬಗೆಹರಿಯದ ರೈತರ ಸಮಸ್ಯೆಗಳು ಸಾಕಷ್ಟಿದೆ. ಇದರ ಪರಿಹಾರ ಮಾರ್ಗವಾಗಿ ರೈತ ಸಂಘವು ನಿರಂತರವಾಗಿ ಪ್ರತಿಭಟನೆ ಮತ್ತು ಹೋರಾಟ ನಡೆಸುತ್ತಿದೆ. ಮುಂದಿನ ತಿಂಗಳು ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಎಲ್ಲ ಇಲಾಖೆಯ ಸಚಿವರು ಜಿಲ್ಲೆಗೆ ಆಗಮಿಸಲಿದ್ದಾರೆ. ಆದ್ದರಿಂದ ಗ್ರಾಮ ಘಟಕಗಳ ರೈತ ಮುಖಂಡರು ಈ ಭಾಗದ ಸಮಸ್ಯೆಗಳನ್ನು ನಮಗೆ ಪಟ್ಟಿ ಮಾಡಿ ನೀಡಬೇಕು. ನಾವು ಜಿಲ್ಲೆಯ ಸಮಗ್ರ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ಆಯಾ ಸಚಿವರಿಗೆ ಬಗೆಹರಿಸಿಕೊಡಲು ಮನವಿ ಮಾಡುತ್ತೇವೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ರೈತರ ಸಮಸ್ಯೆಗಳು ಬಗೆ ಹರಿಯಬೇಕಾದರೆ ಗಟ್ಟಿ ಹೋರಾಟದಿಂದ ಮಾತ್ರ ಸಾಧ್ಯವಾಗಿರುತ್ತದೆ. ಉದಾಹರಣೆಗೆ ರೈತ ಸಂಘದ 130ಕ್ಕೂ ಹೆಚ್ಚು ದಿನಗಳ ಹೋರಾಟದ ಫಲವಾಗಿ ಜಾಗೇರಿಯಲ್ಲಿ ಜಂಟಿ ಸರ್ವೆ ಮಾಡಲು ಸಾಧ್ಯವಾಯಿತು. ಆದ್ದರಿಂದ ಒಗ್ಗಟ್ಟಾಗಿ ನಾವೆಲ್ಲರೂ ನ್ಯಾಯಕ್ಕಾಗಿ ಹೋರಾಟ ಮಾಡಿದರೆ ಎಲ್ಲ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್, ತಾಲೂಕು ಉಪಾಧ್ಯಕ್ಷ ಚಾರ್ಲಿ, ಕಾರ್ಯಾಧ್ಯಕ್ಷ ಪೊನ್ನಸ್ವಾಮಿ, ಸತ್ತೇಗಾಲ ಗ್ರಾಮ ಘಟಕದ ಮಹದೇವು, ಮೊಳಗನಕಟ್ಟೆ ಅಪ್ಪುಸ್ವಾಮಿ, ಜಕ್ಕಳಿ ಲಾರೆನ್ಸ್, ಇಕ್ಕಡಹಳ್ಳಿ ಮಹದೇವಪ್ಪ, ದೊಡ್ಡಿಂದುವಾಡಿ ಗ್ರಾಮ ಘಟಕದ ಅಧ್ಯಕ್ಷ ವಸಂತ್ ಕುಮಾರ್, ಉಪಾಧ್ಯಕ್ಷ ಸುರೇಂದ್ರ, ಗೌರವಾಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಮನು, ಚಿಕ್ಕಿಂದುವಾಡಿ ಗ್ರಾಮದ ರೈತ ಘಟಕದ ಅಧ್ಯಕ್ಷ ರಾಮ್ ರಾವ್ ಇತರರು ಇದ್ದರು.