

ರಿಪ್ಪನ್‌ಪೇಟೆ: ಪಟ್ಟಣದ ಹೊಸನಗರ ರಸ್ತೆಯ ರಾಯಲ್ ಕಂರ್ಟ್ ಲಾಡ್ಜ್ ಪಕ್ಕದಲ್ಲಿ ನೂತನವಾಗಿ ಆರಂಭಗೊಳ್ಳಬೇಕಿದ್ದ ಮದ್ಯದಂಗಡಿ ಸ್ಥಳೀಯರ ವಿರೋಧದಿಂದ ಶನಿವಾರ ರಾತ್ರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.
ಅಬಕಾರಿ ಇಲಾಖೆ ಅಧಿಕಾರಿಗಳ ಸಹಿತ ಸನ್ನದುದಾರರು ಅಂಗಡಿಗೆ ಮದ್ಯ ಸರಬರಾಜು ಮಾಡಲು ಆಗಮಿಸುತ್ತಿದ್ದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಜನರ ಅಹವಾಲು ಆಲಿಸಿದರು. ಸಾರ್ವಜನಿಕರು ಹಾಗೂ ಅಧಿಕಾರಿಗಳ ಜತೆಗಿನ 2 ಗಂಟೆಗಳ ಸುದೀರ್ಘ ಸಮಾಲೋಚನೆಯ ಬಳಿಕ, ಪೊಲೀಸರು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕಿದೆ. ಅಬಕಾರಿ ನಿಯಮದಂತೆ ಮದ್ಯದಂಗಡಿ ಮಂಜೂರಾಗಿದ್ದು ವ್ಯಾಪಾರಕ್ಕಾಗಿ ಮದ್ಯವನ್ನು ತಂದಿದ್ದಾರೆ. ಆದ್ದರಿಂದ ಜನರು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕಲ್ಪಿಸಬಾರದು. ಒಂದು ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಲು ಮುಂದಾದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು. ಒಂದು ವೇಳೆ ನೀವು ರಸ್ತೆ ಹೋರಾಟವನ್ನು ಬಿಟ್ಟು ಪರವಾನಗಿ ರದ್ದುಪಡಿಸಿಕೊಂಡು ಬಂದರೆ ನಿಮಗೆ ರಕ್ಷಣೆ ನೀಡಲಾಗುವುದು. ಅಲ್ಲಿಯವರೆಗೆ ಮದ್ಯವನ್ನು ಅಬಕಾರಿ ಇಲಾಖೆಯಲ್ಲಿ ಇಡಲಾಗುವುದು. ಶೀಘ್ರವಾಗಿ ನೀವು ಒಂದು ತೀರ್ಮಾನಕ್ಕೆ ಬರಬೇಕು ಎಂದು ಡಿವೈಎಸ್‌ಪಿ ಗಜಾನನ ವಾಮನ ಸುತಾರ ತಿಳಿಸಿದ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ತಿಳಿಗೊಂಡಿತು.
ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಅಬಕಾರಿ ನಿಯಮದಂತೆ ಸಿಎಲ್-7 ಮದ್ಯದಂಗಡಿಯ ಪರವಾನಗಿಯನ್ನು ಖಾಸಗಿ ವ್ಯಕ್ತಿಯೋರ್ವರು ಇತ್ತೀಚೆಗೆ ಪಡೆದುಕೊಂಡಿದ್ದಾರೆ. ಉದ್ದೇಶಿತ ಮದ್ಯದಂಗಡಿಯ ಸಮೀಪ ಮೊಯಿದ್ದೀನ್ ಜುಮ್ಮಾ ಮಸೀದಿ ಇರುವುದರಿಂದ ಪ್ರರ್ಥಾನೆ ಇತರ ಧಾರ್ಮಿಕ ಚಟುವಟಿಕೆಗಳಿಗೆ ತೊಡಕುಂಟಾಗುತ್ತದೆ ಹಾಗೂ ಮದರಸದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮದ್ಯದಂಗಡಿಗೆ ಪರವಾನಗಿ ನೀಡಬಾರದಾಗಿ ಜನರು ಹಲವು ಬಾರಿ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಸಮಾಜಿಕ ಕಳಕಳಿಯನ್ನು ಲೆಕ್ಕಿಸದ ಆಡಳಿತ ವರ್ಗ ಮದ್ಯದಂಗಡಿಗೆ ಪರವಾನಗಿ ಮಂಜೂರು ಮಾಡಿದ್ದು ಸನ್ನದುದಾರರು ಮದ್ಯ ವ್ಯಾಪಾರಕ್ಕೆ ಅಣಿಮಾಡಿಕೊಂಡಿದ್ದರು. ಇದರಿಂದ ಉದ್ರಿಕ್ತರಾದ ಸ್ಥಳೀಯರು ಮದ್ಯ ತುಂಬಿದ ವಾಹನವನ್ನು ತಡೆಗಟ್ಟಿ ಆಕ್ರೋಶವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯರಾದ ಆಸ್ೀ, ಪ್ರಕಾಶ್ ಪಾಲೇಕರ್, ಸುಂದರೇಶ್, ವೇದಾವತಿ, ಧನಲಕ್ಷ್ಮೀ, ಸಾಜೀದಾ, ಮುಖಂಡರಾದ ಹಸನಬ್ಬ, ಹನ್ೀ, ಮೋಣು, ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ರಫೀಕ್, ಸಿಪಿಐ ಗಿರೀಶ್, ಪಿಎಸ್‌ಐ ಪ್ರವೀಣ್, ಅಬಕಾರಿ ಅಧಿಕಾರಿಗಳಾದ ನಾಗರಾಜ್, ಅಮಿತ್‌ಕುಮಾರ್ ಇದ್ದರು.