

ಮೈಸೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೊಸದಾಗಿ ಮದ್ಯದಂಗಡಿ ತೆರೆಯಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿಲ್ಲ, ಕುಡಿಯುವವರನ್ನು ತಡೆಯಲು ಆಗುವುದಿಲ್ಲ ಎಂದಷ್ಟೇ ಹೇಳಿದ್ದಾರೆ ಎಂದು ಹೇಳಿದರು.
ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅಸಮಾನತೆ ಸಮಸ್ಯೆ ಎದುರಿಸುತ್ತಿರುವ ಜಾತಿಗಳನ್ನು ಮುಖ್ಯವಾಹಿನಿಗೆ ತರಲು ಅಂಕಿ ಅಂಶಗಳು ಅಗತ್ಯತೆ ಇದ್ದು, ಈ ಅಂಕಿ ಅಂಶ ಜಾತಿ ಜನಗಣತಿ ಮೂಲಕ ದೊರೆಯುತ್ತದೆ. ಜಾತಿಗಣತಿ ಸಮಾಜವನ್ನು ಎಂದಿಗೂ ವಿಭಜಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಾತಿ ಗಣತಿ ಸಮಾಜವನ್ನು ವಿಭಜಿಸುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದ ಅವರು, ನಮ್ಮದು ಜಾತಿ ವ್ಯವಸ್ಥೆಯ ಸಮಾಜವಾಗಿದೆ. ಈ ಜಾತಿ ವ್ಯವಸ್ಥೆಯನ್ನು ನಾವು ಯಾರು ಸಹ ಸೃಷ್ಟಿ ಮಾಡಿದವರಲ್ಲ, ಅದು ಹಿಂದೆ ರಚನೆಯಾಗಿದ್ದು. ಯಾವ ಜಾತಿ ಸ್ವಾತಂತ್ರೃ ಬಂದು 76 ವರ್ಷಗಳಾದರೂ ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ಯಾವ ಸ್ಥಿತಿಗತಿಯಲ್ಲಿದೆ ಎಂದು ತಿಳಿಯಬೇಕು. ಅದಕ್ಕಾಗಿ ಜಾತಿಗಣತಿ ಮಾಡಬೇಕು ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಜಾತಿ ಸಮೀಕ್ಷೆ ವರದಿಯನ್ನು ನೀಡಲು ಮುಂದಾಗಿದ್ದ ಸಂದರ್ಭ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವರದಿ ಪಡೆದಿರಲಿಲ್ಲ. ಇದೀಗ, ಬೇರೆ ಅಧ್ಯಕ್ಷರು ನೇಮಕವಾಗಿದ್ದು, ಕಾಂತರಾಜು ಮಾದರಿಯಲ್ಲಿ ವರದಿ ನೀಡುವಂತೆ ನೂತನ ಅಧ್ಯಕ್ಷರಿಗೆ ಸೂಚಿಸಿದ್ದೇನೆ. ಅವರು ನವೆಂಬರ್‌ನಲ್ಲಿ ವರದಿ ನೀಡುವುದಾಗಿ ಹೇಳಿದ್ದಾರೆ. ಬಹಳ ಹಿಂದುಳಿದವರಿಗೆ ಪ್ರತ್ಯೇಕ ವರ್ಗ ಸೃಷ್ಟಿಸಬೇಕು ಎಂಬ ಬೇಡಿಕೆ ಇದ್ದು, ಈ ಪ್ರತ್ಯೇಕ ವರ್ಗವನ್ನು ನಾವು ಸೃಷ್ಟಿಸಲು ಸಾಧ್ಯವಿಲ್ಲ. ಅದಕ್ಕೆ ಪ್ರತ್ಯೇಕ ನ್ಯಾಯಾಲಯ ರಚನೆಯಾಗಬೇಕು. ಹಿಂದುಳಿದ ವರ್ಗಗಳ ಸಮೀಕ್ಷೆ ವರದಿ ಬಂದ ನಂತರ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.