

ಹೊನ್ನಾಳಿ: ರಾಜ್ಯದಲ್ಲಿ ಮತ್ತೆ ಒಂದು ಸಾವಿರ ಮದ್ಯದಂಗಡಿ ತೆರೆಯಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂಬ ಅಬಕಾರಿ ಸಚಿವರ ಹೇಳಿಕೆಯನ್ನು ಸ್ವಾಮಿ ವಿವೇಕಾನಂದ ಹಾಗೂ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ತೀವ್ರವಾಗಿ ಖಂಡಿಸುತ್ತದೆ ಎಂದು ಚಾರಿಟೇಬಲ್ ಅಧ್ಯಕ್ಷ ಎಂ.ಆರ್. ಮಹೇಶ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ತಹಸೀಲ್ದಾರ್ ಪಟ್ಟರಾಜೇಗೌಡ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಅಕ್ಟೋಬರ್ ತಿಂಗಳಲ್ಲಿ ಗಾಂಧೀಜಿಯವರ ಜಯಂತಿ ಇರುವ ದಿನಗಳಲ್ಲೇ ಮದ್ಯದಂಗಡಿ ತೆರೆಯಲು ಅನುಮತಿ ನೀಡುತ್ತೇವೆ ಎಂದು ಹೇಳಿಕೆ ನೀಡುತ್ತಿರುವ ಅಬಕಾರಿ ಸಚಿವರ ನಡವಳಿಕೆ ನಾಚಿಕೆಗೇಡಿನ ಸಂಗತಿ ಎಂದರು.
ಈಗಾಗಲೇ ರೈತರು, ಮಧ್ಯಮ ವರ್ಗದವರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಮದ್ಯದಂಗಡಿ ತೆರಯುತ್ತೇವೆ ಎಂದು ಹೇಳಿಕೆ ನೀಡುತ್ತಿರುವ ಸರ್ಕಾರದ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ಈಗಾಗಲೇ ಯುವ ಸಮುದಾಯ ಕುಡಿತದ ಚಟಕ್ಕೆ ಬಲಿಯಾಗಿ, ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವ ಘಟನೆ ದಿನೇದಿನೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮದ್ಯದಂಗಡಿಗಳು ಬೇಕೆ? ಎಂದು ಅವರು ಪ್ರಶ್ನಿಸಿದರು.
ಒಂದು ಸಾವಿರ ಹೊಸ ಮದ್ಯದಂಗಡಿಗಳಿಗೆ ಸಚಿವರು ಅನುಮತಿ ನೀಡುವುದನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ತಾಲೂಕಿನಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ದೀಕ್ಷಿತ್, ಖಜಾಂಚಿ ಮಂಜುನಾಥ್, ಸದಸ್ಯರಾದ ಹನುಮಂತಪ್ಪ, ವೀರೇಶ್ ಉಪಸ್ಥಿತರಿದ್ದರು.