ಕನಕರಾಯನಿಗೆ ಮದ್ಯವೇ ನೈವೇದ್ಯ

Liquor is the offering to Kanaka Raya.
ಕನಕರಾಯನಿಗೆ ನೈವೇದ್ಯವಾಗಿ ಸರಾಯಿ ನೈವೇದ್ಯ.
Published on

ಗುಳೇದಗುಡ್ಡ: ಜಾತ್ರೆ, ಉತ್ಸವ ಸಂದರ್ಭದಲ್ಲಿ ದೇವರಿಗೆ ಹೋಳಿಗೆ, ಕಡಬು, ಹುಗ್ಗಿ ನೈವೇದ್ಯ ಅರ್ಪಿಸುವುದು ಸಾಮಾನ್ಯ ಸಂಗತಿ. ಆದರೆ, ಪಟ್ಟಣದ ಸಮೀಪದ ಕೆಲವಡಿ ಗ್ರಾಮದಲ್ಲಿನ ಲಕ್ಷ್ಮೀ ರಂಗನಾಥ ದೇವರ ಜಾತ್ರೆಯಲ್ಲಿ ನೈವೇದ್ಯವಾಗಿ ಮಾದಲಿ, ಹುಗ್ಗಿ ಜತೆಗೆ ಮದ್ಯವನ್ನೂ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಹೆಡಿಗೆ ರೊಟ್ಟಿ, ಗಡಿಗೆ ಹುಗ್ಗಿ ಎಂದು ಭಕ್ತರು ಈ ದೇವರಿಗೆ ಮನೆಯಲ್ಲಿ ಹುಗ್ಗಿ ಮಾಡಿದ ಗಡಿಗೆಯನ್ನು ಹಾಗೂ ಹೆಡಿಗೆ ತುಂಬ ರೊಟ್ಟಿಯನ್ನು ತಂದು ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ. ಜತೆಗೆ ತೀರ್ಥವಾಗಿ ಮದ್ಯ ಅರ್ಪಿಸಲಾಗುತ್ತದೆ. ಕೆಲವಡಿ ಲಕ್ಷ್ಮಿರಂಗನಾಥ ದೇವರ ಜಾತ್ರೆ ನಡೆಯುವ ಮುನ್ನಾದಿನ ಲಿಂಗಾಪುರದಲ್ಲಿನ ಕನಕರಾಯನ ಜಾತ್ರೆ ನಡೆಯುತ್ತದೆ. ಅಲ್ಲಿ ಮದ್ಯವನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ.'

ಈ ಜಾತ್ರೆಗೆ ನಿಂಗಾಪುರ, ತಿಮ್ಮಸಾಗರ, ಹಂಸನೂರು, ಹಿರೇಬೂದಿಹಾಳ, ಖಾಜಿಬೂದಿಹಾಳ, ಹಂಗರಗಿ, ಕಟಗೇರಿ, ಸೂಳಿಕೇರಿ, ನೀರಲಕೇರಿ, ಕೊಂಕಣಕೊಪ್ಪ, ಅಗಸನಕೊಪ್ಪ, ಹೂಲಗೇರಿ, ಇನಾಂಎರಗೊಪ್ಪ, ಯಂಕಂಚಿ ಮಣಿನಾಗರ, ಇನಾಂಹುಲ್ಲಿಕೇರಿ, ಹವಳಕೋಡ, ಆಡಗಲ್ಲ, ಕುಟಕನಕೇರಿ, ಕೆಂಧೂರು, ಪರ್ವತಿ ಸೇರಿದಂತೆ ಹೈದ್ರಾಬಾದ, ಲಾಥೂರ, ಮುಂಬೈ, ಗೋವಾ ಮತ್ತಿತರರ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ.

ಇಂದು ಜಾತ್ರೆ: ಮಾ 22 ರಂದು ಕೆಲವಡಿಯ ಶ್ರೀ ಲಕ್ಷ್ಮೀ ರಂಗನಾಥ ದೇವರ ಜಾತ್ರೋತ್ಸವ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ಕಳಸದ ಮೆರವಣಿಗೆ, ಸಂಜೆ 5 ಗಂಂಟೆಗೆ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಯ ಮಹಾರಥೋತ್ಸವ ನಡೆಯಲಿದೆ. ರಾತ್ರಿ 10 ಗಂಟೆಗೆ ಮನರಂಜನಾ ಕಾರ್ಯಕ್ರಮ ನಡೆಯುವುದು. ಜಾತ್ರೋತ್ಸವದ ಅಂಗವಾಗಿ ಮಾ. 23ರಂದು ಸಂಜೆ 4 ಗಂಟೆಗೆ ಜಂಗೀ ಕುಸ್ತಿ ಪಂದ್ಯಗಳು ನಡೆಯಲಿವೆ. ಬಳಿಕ ಕಡುಬಿನ ಕಾಳಗ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಮದ್ಯ ಅರ್ಪಿಸುವುದರ ಹಿನ್ನೆಲೆಯೇನು?

ದೇವಸ್ಥಾನದ ಪೂಜಾರಿಯವರು ಹೇಳುವ ಪ್ರಕಾರ, ಸಮುದ್ರಮಥನ ಕಾಲದಲ್ಲಿ ಸುರೆ ಹುಟ್ಟಿತು. ಆ ಸಂದರ್ಭದಲ್ಲಿ ಅದನ್ನು ದೇವತೆಗಳು ಸೇವಿಸಿದ್ದರು. ಅದರ ಆಚರಣೆಯಂತೆ ಇಲ್ಲಿರುವ ರಂಗನಾಥ ಅಂದರೆ ವಿಷ್ಣು ದೇವರಿಗೆ ಮದ್ಯವನ್ನು ನೈವೇದ್ಯವಾಗಿ ಅರ್ಪಿಸುವ ರೂಢಿಯಾಗಿರಬಹುದು ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net