

ಬೆಳಗಾವಿ : ಇಲ್ಲಿಯ ಸದಾಶಿವ ನಗರದ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ಬುಧವಾರ ರಾತ್ರಿ ದಾಳಿ ನಡೆಸಿದ್ದು, ದಾಳಿ ವೇಳೆ ಲಕ್ಷಾಂತರ ಮೌಲ್ಯದ ಅಕ್ರಮ ಮದ್ಯ ಪತ್ತೆಯಾಗಿದೆ.
ಖಚಿತ ಮಾಹಿತಿ ಆಧರಿಸಿ ನಗರದ ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಅಲ್ತಾಫ್ ಮುಲ್ಲಾ, ನೇತೃತ್ವದ ತಂಡ ಎಪಿಎಂಸಿ ಪೊಲೀಸ್ ಅಧಿಕಾರಿ ಸಿಬ್ಬಂದಿ ಸಹಕಾರದಿಂದ ಸದಾಶಿವ ನಗರದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟ 5,37.500 ರೂ . ಮೌಲ್ಯದ ಗೋವಾ ರಾಜ್ಯದಿಂದ ತಂದಿದ್ದ ವಿವಿಧ ಕಂಪನಿಯ ಒಟ್ಟು 475 ಲೀಟರ್ ಗಳಷ್ಟು ಅಕ್ರಮ ಮದ್ಯದ ಬಾಟಲುಗಳನ್ನು ಜಫ್ತು ಮಾಡಿಕೊಂಡಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ನಗರದ ಶೆಟ್ಟಿ ಗಲ್ಲಿಯ ಆರೋಪಿ ಹರೀಶ ರಮೇಶ ಭಸ್ಮೆ (35) ನನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ. ಇನ್ನೋರ್ವ ಆರೋಪಿ ರಾಜೇಶ ಕೇಶವ ನಾಯಕ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.