

ಶ್ರೀರಂಗಪಟ್ಟಣ: ಗೂಡ್ಸ್ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ 42.81 ಲಕ್ಷ ರೂ. ಮೌಲ್ಯದ ಮದ್ಯವನ್ನು ವಾಹನ ಸಮೇತ ಅಬಕಾರಿ ಪೊಲೀಸರು ಭಾನುವಾರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಅಬಕಾರಿ ಪೊಲೀಸರು ತಪಾಸಣೆ ಮಾಡುತ್ತಿದ್ದ ವೇಳೆ ತಿ.ನರಸೀಪುರ ತಾಲೂಕಿನ ಮಲಿಯೂರು ಗ್ರಾಮದ ಮದ್ಯದ ಘಟಕದಿಂದ ಬೆಳಗಾವಿಯ ಕೆಎಸ್‌ಬಿಸಿಎಲ್ ಲಿಕ್ಕರ್ ಡಿಪೋ ಸೆಂಟ್ರಲ್ ವೇರ್ ಹೌಸ್‌ನ ಗೋದಾಮಿಗೆ ಮದ್ಯವನ್ನು ಸಾಗಣೆ ಮಾಡುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಮದ್ಯ ಪತ್ತೆಯಾಗಿದೆ.
ವಾಹನದ ದಾಖಲೆಗಳನ್ನು ಪರಿಶೀಲಿಸಿದ ವೇಳೆ ಅಬಕಾರಿ ಕಾಯ್ದೆ ಮಾದಕ ದ್ರವ್ಯಗಳ ಸ್ವಾಧೀನ, ಸಾಗಣೆ, ಆಮದು ಹಾಗೂ ರಫ್ತಿನ ಪರವಾನಿಗೆ ಷರತ್ತು ಉಲ್ಲಂಘನೆಯಾಗಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಪಾಂಡವಪುರ ಉಪ ವಿಭಾಗದ ಅಬಕಾರಿ ನೀರಿಕ್ಷಕ ಪ್ರಪುಲ್ಲಾ ಚಂದ್ರ ಅವರು ಮದ್ಯ, ವಾಹನ ಹಾಗೂ ರಹದಾರಿ ಪತ್ರವನ್ನು ವಶಕ್ಕೆ ಪಡೆದಿದ್ದಾರೆ.