

ಬೆಂಗಳೂರು: ಲೋಕಸಭಾ ಚುನಾವಣೆಗೆ ಏ.26ರಂದು ಮೊದಲ ಹಂತದಲ್ಲಿ ಮತದಾನ ನಡೆಯುವ ಹಿನ್ನೆಲೆಯಲ್ಲಿ ಏ.24ರ ಸಂಜೆ 5 ಗಂಟೆಯಿಂದ ಏ.26ರ ಮಧ್ಯರಾತ್ರಿ 12 ಗಂಟೆವರೆಗೆ ಹಾಗೂ ಮತ ಎಣಿಕೆ ಹಿನ್ನೆಲೆಯಲ್ಲಿ ಜೂ.3ರ ಮಧ್ಯರಾತ್ರಿ 12 ಗಂಟೆಯಿಂದ ಜೂ.4ರ ಮಧ್ಯರಾತ್ರಿ 12 ಗಂಟೆವೆರಗೆ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯನ್ನು ಮುಕ್ತ, ನಿಷ್ಟಕ್ಷಪಾತವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವ ನಿಟ್ಟಿನಲ್ಲಿ ಮತದಾನ ಅಂತ್ಯಗೊಳಿಸುವ 48 ಗಂಟೆ ಪೂರ್ವದಲ್ಲಿ ಹಾಗೂ ಮತ ಎಣಿಕೆ ದಿನದಂದು ಮದ್ಯ ಉತ್ಪಾದನೆ, ಮಾರಾಟ, ಹಂಚಿಕೆ, ಸಾಗಾಣಿಕೆ, ಶೇಖರಣೆ ಇತ್ಯಾದಿ ನಿಷೇಧಿಸಿ "ಒಣದಿನ' ಎಂದು ಘೋಷಿಸಲಾಗಿದೆ. ಈ ಮೇಲಿನ ದಿನಗಳಲ್ಲಿ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ಕೊಟ್ಟಿದ್ದಾರೆ.