

ಬಾಳೆಹೊನ್ನೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಿಸಿ ಟ್ರಸ್ಟ್ ನಿಂದ ಪಟ್ಟಣದಲ್ಲಿ ಆ.5ರಿಂದ 12ರವರೆಗೆ ಮದ್ಯವರ್ಜನ ಶಿಬಿರ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜನಜಾಗೃತಿ ವೇದಿಕೆ ಬಿ.ಸಿ.ಟ್ರಸ್ಟ್‌ನ ಚಿತ್ರದುರ್ಗ ವಿಭಾಗದ ಮೇಲ್ವಿಚಾರಕ ನಾಗರಾಜ್ ಕುಲಾಲ್ ತಿಳಿಸಿದರು.
ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಮದ್ಯವರ್ಜನ ಶಿಬಿರ ಆಯೋಜನೆಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಮದ್ಯದ ಚಟಕ್ಕೆ ಬಿದ್ದ ವ್ಯಕ್ತಿ ಎಂತಹ ಕಾರ್ಯ ಮಾಡಲು ಹಿಂಜರಿಲ್ಲ. ದುಶ್ಚಟಗಳಿಗೆ ತುತ್ತಾದ ವ್ಯಕ್ತಿ ತನ್ನ ಜೀವನವನ್ನೇ ಹಾಳು ಮಾಡಿಕೊಳ್ಳುವ ಜತೆಗೆ ಇಡೀ ಕುಟುಂಬವನ್ನು ಬೀದಿಗೆ ತರಲಿದ್ದಾನೆ. ಈ ಹಿನ್ನೆಲೆಯಲ್ಲಿ ವೀರೇಂದ್ರ ಹೆಗ್ಗಡೆ ಅವರು ಮದ್ಯವರ್ಜನ ಶಿಬಿರ ಆಯೋಜಸಿದ್ದು, ಈವರೆಗೆ ರಾಜ್ಯಾದ್ಯಂತ 1950ಕ್ಕೂ ಹೆಚ್ಚು ಶಿಬಿರಗಳು ನಡೆದಿವೆ. 1.35 ಲಕ್ಷಕ್ಕೂ ಅಧಿಕ ಮದ್ಯವ್ಯಸನಿಗಳು ಮದ್ಯಪಾನ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಮುರಳೀಧರ್, ಸಚ್ಚಿದಾನಂದ, ಸುರೇಖಾ, ಪ್ರದೀಪ್ ಸೇರಿದಂತೆ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಹಾಜರಿದ್ದರು.