

ಬೆಂಗಳೂರು: ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸಿಹಿ ತಿನಿಸುಗಳು ಹಾಗೂ ಆಹಾರ ಪದಾರ್ಥಗಳಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆಯನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿಷೇಧಿಸಿದೆ.
ಈ ಕುರಿತು ಇಲಾಖೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದು, ರಾಜ್ಯದ ಕೆಲವು ಪ್ರದೇಶಗಳಲ್ಲಿ ಸ್ಮೋಕಿಂಗ್ ಬಿಸ್ಕತ್ತು, ಸಿಹಿ ತಿನಿಸುಗಳು ಹಾಗೂ ಆಹಾರ ಪದಾರ್ಥಗಳ ಸೇವನೆ ಸಂದರ್ಭದಲ್ಲಿ ಲಿಕ್ವಿಡ ನೈಟ್ರೋಜನ್ ಬಳಕೆ ಮಾಡಲಾಗುತ್ತಿದೆ. ಆದರೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ನಿಯಮಗಳ ಪ್ರಕಾರ ಲಿಕ್ವಿಡ್ ನೈಟ್ರೋಜನ್ ಅನ್ನು ಹೈನು ಉತ್ಪನ್ನ ಹಾಗೂ ಐಸ್‌ಕ್ರೀಂ ತಯಾರಿಕೆಯ ಸಂದರ್ಭದಲ್ಲಿ ಮಾತ್ರ ಬಳಸಲು ಅನುಮೋದನೆಯಿದೆ ಎಂದು ತಿಳಿಸಲಾಗಿದೆ.
ಸಿಹಿ ತಿನಿಸುಗಳು ಹಾಗೂ ಆಹಾರ ಪದಾರ್ಥಗಳನ್ನು ಸೇವನೆಗೆ ಒದಗಿಸುವ ಸಂದರ್ಭದಲ್ಲಿ ಲಿಕ್ವಿಡ್ ನೈಟ್ರೋಜನ್ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ.
ಕೆಲ ದಿನಗಳ ಹಿಂದೆ ಇಲ್ಲಿನ 12 ವರ್ಷದ ಬಾಲಕಿಯೊಬ್ಬಳು ವಿವಾಹ ಸಮಾರಂಭದಲ್ಲಿ ಸ್ಮೋಕಿ ಪಾನ್ (ಲಿಕ್ವಿಡ್ ನೈಟ್ರೋಜನ್ ಪಾನ್) ಸೇವಿಸಿ, ಅಸ್ವಸ್ತಳಾಗಿದ್ದಳು. ಬಳಿಕ ಅವಳ ಹೊಟ್ಟೆಯಲ್ಲಿ ರಂಧ್ರ ಕಾಣಿಸಿಕೊಂಡು, ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದರು.