

ಮಡಿಕೇರಿ:
ಮಡಿಕೇರಿ ತಾಲೂಕು ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ವ್ಯಕ್ತಿಯನ್ನು ಕೊಡಗು ಜಿಲ್ಲಾ ಪೊಲೀಸರು ಗುರುವಾರ (ಆ.೩೧) ಬಂಧಿಸಿದ್ದಾರೆ. ಬಂಧಿತನನ್ನು ತಾವೂರು ಗ್ರಾಮದ ನಿವಾಸಿಯಾದ ಹಾಸೀಂ (೪೭) ಎಂದು ಗುರುತಿಸಲಾಗಿದೆ.
ತಾವೂರು ಗ್ರಾಮದಲ್ಲಿ ತೋಟದ ಲೈನ್ ಮನೆಯೊಂದರಲ್ಲಿ ಕೇರಳ ಮೂಲದ ವ್ಯಕ್ತಿ ಅಕ್ರಮವಾಗಿ ಮಾನವ ಜೀವಕ್ಕೆ ಧಕ್ಕೆಯಾಗುವಂತಹ ಹಾಗೂ ಅಮಲೇರಿಸುವ ಪದಾರ್ಥವನ್ನು ಬಳಸಿ ಮದ್ಯ ತಯಾರಿಸುವುದು ಹಾಗೂ ತಯಾರಿಸಿದ ಮದ್ಯವನ್ನು ಕೇರಳದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಹಂಸ ಸಿಕ್ಕಿಬಿದ್ದಿದ್ದಾನೆ. ಮದ್ಯ ತಯಾರಿಸಲು ಬಳಸುವ ೬೦ ಕೆ.ಜಿ ೩೦೦ ಗ್ರಾಂ ತೂಕದ ಕಾಸ್ಟಿಕ್ ಕಾರ್ಮೆಲ್ ಮತ್ತು ೨ ಸಾವಿರ ಖಾಲಿ ಬಾಟಲ್, ಲೆಬಲ್, ಮುಚ್ಚಳ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಡಿವೈಎಸ್‌ಪಿ ಎಂ.ಜಗದೀಶ್, ಸಿಪಿಐ ಅನೂಪ್ ಮಾದಪ್ಪ, ಭಾಗಮಂಡಲ ಪಿಎಸ್‌ಐ ಶೋಭಾ ಲಮಾಣಿ, ಭಾಗಮಂಡಲ ಪೊಲೀಸ್ ಠಾಣೆ ಸಿಬ್ಬಂದಿ, ಡಿಸಿಆರ್‌ಬಿ ವಿಶೇಷ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು ಎಂದು ಎಸ್‌ಪಿ ಕೆ. ರಾಮರಾಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.