ನಿರ್ಗತಿಕರಿಗೆ ಲಯನ್ಸ್ ಸೇವೆ, ದೇವನಹಳ್ಳಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಶ್ರೀರಾಮಯ್ಯ ಸಹಕಾರದಲ್ಲಿ ಆಹಾರ ವಿತರಣೆ

A.09 dhl Lions Food news- ph 1 A
Published on

ದೇವನಹಳ್ಳಿ: ದೇವನಹಳ್ಳಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರು, ನಿರ್ಗತಿಕರು ಬೀದಿಬದಿಯ ನಿರಾಶ್ರಿತರಿಗಾಗಿ ಪುರಸಭಾ ಸದಸ್ಯ ಬಾಂಬೆ ನಾರಾಯಣಸ್ವಾಮಿ ತಂಡ 15 ದಿನದಿಂದ ಪ್ರತಿ ದಿನ 500ಕ್ಕೂ ಹೆಚ್ಚು ಜನರಿಗೆ ಊಟ ಮತ್ತು ನೀರಿನ ವ್ಯವಸ್ಥೆ ಮಾಡುತ್ತಿದೆ. ಇವರಿಗೆ ಬೆನ್ನೆಲುಬಾಗಿ ನಿವೃತ್ತ ಮುಖ್ಯಶಿಕ್ಷಕ ಹಾಗೂ ಲಯನ್ಸ್ ಸಂಸ್ಥೆ ಅಧ್ಯಕ್ಷರೂ ಆದ ಶ್ರೀರಾಮಯ್ಯ ನಿಂತಿದ್ದಾರೆ.

ಲಯನ್ಸ್ ಅಧ್ಯಕ್ಷ ಶ್ರೀರಾಮಯ್ಯ ಮಾತನಾಡಿ, ಬಾಂಬೆ ನಾರಾಯಣಸ್ವಾಮಿ ಮತ್ತು ಆತನ ಸ್ನೇಹಿತರು ನಮ್ಮ ಸಂಸ್ಥೆಯ ಮಾರ್ಗದರ್ಶನಲ್ಲಿ 15 ದಿನದಿಂದ ಮಧ್ಯಾಹ್ನ ಮತ್ತು ರಾತ್ರಿ 500 ಜನರಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಪಟ್ಟಣದ ಹಳೇ ಬಸ್ ನಿಲ್ದಾಣ, ಸಾಧುಮಠದ ಸಮೀಪ, ಶಿವಕುಮಾರ ಸ್ವಾಮೀಜಿ ವೃತ್ತ, ಪ್ರಸನ್ನಹಳ್ಳಿ, ಆಕಾಶ್ ಆಸ್ಪತ್ರೆ ಹಾಗೂ ಚಿಕ್ಕಕೆರೆ ಬಳಿ ನಿರಾಶ್ರಿತರಿಗೆ ಮತ್ತು ಗಾರೆ ರವಿ ಲೇಔಟ್ ಸಮೀಪ, ಬೈಚಾಪುರ ರಸ್ತೆ, ಹಿರಾನಂದನಿ, ಉಗನವಾಡಿ ಕ್ರಾಸ್ ಬೈಚಾಪುರ ರಸ್ತೆ ಸಮೀಪ ವಲಸೆ ಕಟ್ಟಡ ಕಾರ್ಮಿಕರಿಗೆ ಪ್ರತಿನಿತ್ಯ ಊಟ ತಲುಪಿಸಲಾಗುತ್ತಿದೆ. ಲಾಕ್‌ಡೌನ್ ಅಂತ್ಯವಾಗುವವರೆಗೂ ಈ ಕಾರ್ಯ ನಡೆಯಲಿದೆ ಎಂದರು.

ಕೂಲಿಕಾರ್ಮಿಕರಿಗೆ ನೆರವು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನಜೀನವ ಅಸ್ತವ್ಯಸ್ಥವಾಗಿದೆ. ದಿನಗೂಲಿ ನೌಕರರು, ನಿರಾಶ್ರಿತರು, ಕೂಲಿ ಕಾರ್ಮಿಕರ ಪರಿಸ್ಥಿತಿ ದಯನೀಯವಾಗಿದೆ. ಒಪ್ಪೊತ್ತಿನ ಊಟಕ್ಕೆ ಪರದಾಡುವ ಸ್ಥಿತಿಯಲ್ಲಿರುವ ಇಂಥವರ ನೆರವಿಗೆ ಹಲವು ಸಂಘ-ಸಂಸ್ಥೆಗಳು ಮುಂದಾಗಿದ್ದು, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿವೆ. ಇಂಥದ್ದೇ ಕಾರ್ಯವನ್ನು ಲಯನ್ಸ್ ಸಂಸ್ಥೆ ನಡೆಸಿಕೊಂಡು ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net