ಕಾಯಕಯೋಗಿಗೆ ನೆರವಾಗುವುದು ಎಲ್ಲರ ಕರ್ತವ್ಯ: ಲಯನ್ಸ್ ಜಿಲ್ಲಾ ಸಂಪುಟ ಸಲಹೆಗಾರ ದೇವೇಗೌಡ ಅಭಿಮತ

Lions Provincial Conference Mandya
Published on

ಮಂಡ್ಯ: ಪೌರಕಾರ್ಮಿಕರು ಹಾಗೂ ಸಮಾಜದ ಕೆಳ ಸ್ಥರದಲ್ಲಿ ಕೆಲಸ ಮಾಡುವ ಕಾಯಕಯೋಗಿಗಳಿಗೆ ಸಹಾಯ ಮಾಡುವುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದು ಲಯನ್ಸ್ ಜಿಲ್ಲಾ ಸಂಪುಟ ಸಲಹೆಗಾರ ದೇವೇಗೌಡ ಶ್ಲಾಸಿದರು.

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ವತಿಯಿಂದ ನಗರದ ಹೊರ ವಲಯದಲ್ಲಿರುವ ಎ ಆ್ಯಂಡ್ ಎ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಂತೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರು ಒಂದೆರಡು ದಿನ ಚಳವಳಿ ನಡೆಸಿದರೆ, ಪರಿಸ್ಥಿತಿ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಈಗಾಗಲೇ ನೋಡಿದ್ದೇವೆ ಎಂದರು.

ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಜತೆಗೆ ಶ್ರಮಿಕರು ಸಹ ಸಮಾಜಕ್ಕಾಗಿ ಕೆಲಸ ಮಾಡುತ್ತಾರೆ. ಅವರಿಗೂ ವಿವಿಧ ಸೌಲಭ್ಯಗಳನ್ನು ನೀಡುತ್ತಿರುವುದು ಶ್ಲಾಘನೀಯ. ಪ್ರಾಂತೀಯ ಅಧ್ಯಕ್ಷ ಎಸ್.ಪಿ.ಆದರ್ಶ ಮತ್ತು ಅವರ ತಂಡ ಲಕ್ಷಾಂತರ ರೂ.ಗಳನ್ನು ಪ್ರತಿ ವರ್ಷವೂ ಸೇವಾ ಕಾರ್ಯ ಕೈಗೊಳ್ಳುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಪ್ರಾಂತೀಯ ಅಧ್ಯಕ್ಷ ಎಸ್.ಪಿ.ಆದರ್ಶ ಮಾತನಾಡಿ, ಪ್ರತಿಯೊಬ್ಬರಲ್ಲೂ ಅದಮ್ಯ ಚೈತನ್ಯ ಶಕ್ತಿ ಅಂತರ್ಗತವಾಗಿದೆ. ಅದು ಸಮಾಜಮುಖಿಯಾಗಿ ಎಲ್ಲರನ್ನೂ ದೈವ್ಯತ್ವದೆಡೆಗೆ ಸೆಳೆಯುವ ಹಾಗೂ ಉದೀಪನಗೊಳಿಸುವ ಶಕ್ತಿ ಸಾಮಾಜಿಕ ಸಂಸ್ಥೆಗಳಿವೆ. ಸ್ವಯಂ ಸೇವಾ ಸಂಸ್ಥೆಗಳು ನಮ್ಮ ಆಲೋಚನೆ, ವರ್ತನೆ ಬದಲಾಯಿಸುತ್ತವೆ. ಸ್ವಾರ್ಥವನ್ನು ಬಿಟ್ಟು ಸಮಾಜಮುಖಿ ಚಿಂತನೆ ಬೆಳೆಸುತ್ತದೆ. ಜಡಶೀಲ ಪರಂಪರೆಯಿಂದ ಚಲನಶೀಲ ಪರಂಪರೆಯತ್ತ ಕೊಂಡೊಯ್ಯುತ್ತದೆ. ಮನಸ್ಸು ಮತ್ತು ಹೃದಯವನ್ನು ಸಮ್ಮಿಶ್ರಗೊಳಿಸಿ ಸನ್ಮಾರ್ಗದತ್ತ ಕೊಂಡೊಯ್ದು ಜೀವ ಕೊಡುವುದು ಪುಣ್ಯದ ಕೆಲಸವಾಗಿದೆ. ಇದು ಸಾರ್ಥಕತೆಯಾಗಿದೆ. ಮನುಷ್ಯನ ಅಂತಿಮ ಗುರಿ ಏನಾದರೂ ಸಾಧಿಸಿ ಹೆಜ್ಜೆ ಗುರುತು ಬಿಟ್ಟು ಹೋಗುವುದಾಗಿದೆ. ಸಮಾಜದಲ್ಲಿ ಯಾವಾಗಲೂ ನಮ್ಮ ಪ್ರಭಾವದಿಂದ ಗುರುತಿಸದೆ ಸ್ವಭಾವದಿಂದ ಗುರುತಿಸುವಂತಾಗಬೇಕು ಎಂದು ಹೇಳಿದರು.

ಮಲ್ಟಿಪಲ್ ಕೌನ್ಸಿಲ್ ಛೇರ್ಮನ್ ಡಾ.ಎನ್.ಕೃಷ್ಣೇಗೌಡ, ಜಿಲ್ಲಾ ಪ್ರಾಂತಪಾಲ ಎನ್.ಸುಬ್ರಮಣ್ಯ, ಮತಿದೇವಕುಮಾರ್, ಸಿ.ಡಿ.ಕೃಷ್ಣ , ಡಾ.ಜಿ.ಎ.ರಮೇಶ್, ಕೆ.ಎಸ್.ಸುನಿಲ್‌ಕುಮಾರ್, ದೇವರಸೇಗೌಡ, ಚಂದ್ರಶೇಖರ್, ಸುರೇಶ, ಜಗದೇಶ್, ಕೆಂಪೇಗೌಡ, ರೇವಣ್ಣ , ನಿಂಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net