ನಿಸ್ವಾರ್ಥ ಸೇವೆಗೆ ಲಯನ್ಸ್ ಸಂಸ್ಥೆ ಸದಾ ಸಿದ್ಧ

3
Published on

ಮೈಸೂರು: ವಿಶ್ವದ ಎಲ್ಲ ದೇಶಗಳಲ್ಲಿ ಇರುವ ಲಯನ್ಸ್ ಸಂಸ್ಥೆ ಸೇವೆಯನ್ನೇ ಮುಖ್ಯ ಧ್ಯೇಯವಾಗಿರಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಇಂತಹ ಸಂಸ್ಥೆಯನ್ನು ಎಲ್ಲರೂ ಸೇರಿ ಮುನ್ನಡೆಸಬೇಕು ಎಂದು ಲಯನ್ಸ್ ಜಿಲ್ಲೆ 317ರ ಜಿಲ್ಲಾಪಾಲಕ ಎನ್.ಕೃಷ್ಣೇಗೌಡ ಹೇಳಿದರು.

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಹು ಜಿಲ್ಲಾ 16ನೇ ಸಮ್ಮೇಳನ ‘ಸಪ್ತ ಸಂಪದ’ದಲ್ಲಿ ಅವರು ಮಾತನಾಡಿದರು.

ಪ್ರಪಂಚದ ಮೂಲೆ ಮೂಲೆಯಲ್ಲೂ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ಕೆಲಸ ನಿರ್ವಹಿಸುತ್ತಿದ್ದು, ಅಪಾರ ಸದಸ್ಯರನ್ನು ಒಳಗೊಂಡಿದೆ. ನಿಸ್ವಾರ್ಥ ಸೇವೆಯನ್ನೇ ಧ್ಯೇಯವಾಗಿಸಿಕೊಂಡು ಬರುವ ಮೂಲಕ ಸಾರ್ವಜನಿಕ ಬೆಂಬಲಕ್ಕೆ ನಿಂತಿದೆ ಎಂದರು.

ಯಾವುದೇ ಸೇವಾ ಸಂಸ್ಥೆಗಳು ಪ್ರಾರಂಭವಾಗುವುದರಿಂದ ಹಾಗೂ ಅದಕ್ಕೆ ಸದಸ್ಯರಾಗುವುದರಿಂದ ಹೆಚ್ಚು ಸಾರ್ವಜನಿಕರಿಗೆ ಸೇವೆ ಮಾಡುವುದಕ್ಕೆ ಸಹಕಾರಿಯಾಗುತ್ತದೆ. ಇಂತಹ ಸೇವಾ ಸಂಸ್ಥೆಗಳನ್ನು ಯಾವುದೇ ಕಾರಣಗಳಿಂದ ಮುಚ್ಚುವಂತಹ ಕೆಲಸ ಮಾಡಬಾರದು. ಆ ಸಂಸ್ಥೆಯ ಮೂಲಕ ಅಭಿವೃದ್ಧಿಯ ಚಟುವಟಿಕೆಗಳು ಹಾಗೂ ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಬೇಕು ಎಂದರು.

ಲಯನ್ಸ್ ಅಂತಾರಾಷ್ಟ್ರೀಯ ನಿರ್ದೇಶಕ ಪಂಕಜ್ ಮೆಹ್ತಾ ಮಾತನಾಡಿ, ದೇಶಾದ್ಯಂತ ಲಕ್ಷಾಂತರ ಸದಸ್ಯತ್ವ ಹೊಂದಿರುವ ಲಯನ್ಸ್ ಕ್ಲಬ್ ನಿಸ್ವಾರ್ಥದಿಂದ ವಿವಿಧ ಸಾಮಾಜಿಕ ಸೇವೆ ಸಲ್ಲಿಸುವ ಮೂಲಕ ಇತರರಿಗೂ ಪ್ರೇರಣೆ ನೀಡುವಂತಹ ಸಂಸ್ಥೆಯಾಗಿದೆ ಎಂದರು.

ನಗರದಲ್ಲಿ ಹಲವು ವರ್ಷಗಳಿಂದ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನೆರವೇರಿಸುತ್ತ ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಸದಸ್ಯತ್ವವನ್ನು ಹೊಂದುವ ಮೂಲಕ ಸಂಸ್ಥೆ ಬೆಳೆಸಬೇಕು ಎಂದು ಸಲಹೆ ನೀಡಿದರು.

ನಮ್ಮ ವೃತ್ತಿ ಜೀವನದ ಜತೆಗೆ ಸಾಮಾಜಿಕ, ಮಾನವೀಯ ಸ್ಪಂದನೆ ನೀಡಲು ಲಯನ್ಸ್ ನಂತರ ವಿವಿಧ ಸಂಘ, ಸಂಸ್ಥೆಗಳು ಕ್ರಿಯಾಶೀಲವಾಗಿ ತಮ್ಮ ಪಾತ್ರ ನಿರ್ವಹಿಸುತ್ತಿವೆ. ಇದರಿಂದಾಗಿ ವಿಶ್ವದ ವಿವಿಧೆಡೆ ಸೇವಾ ಚಟುವಟಿಕೆ ನಿರಂತರವಾಗಿ ಜರುಗುತ್ತಿರುತ್ತವೆ ಎಂದರು.

ಒಂದು ಸಂಸ್ಥೆಯನ್ನು ಇಷ್ಟು ವರ್ಷಗಳ ಕಾಲ ಕಾಪಾಡಿಕೊಂಡು ಬರುವುದು ಸುಲಭದ ಕೆಲಸವಲ್ಲ. ಇದರಲ್ಲಿ ಪ್ರತಿಯೊಬ್ಬ ಸದಸ್ಯನ ಛಲ, ಕಾರ್ಯದಕ್ಷತೆ ಹಾಗೂ ಸೇವಾ ಮನೋಭಾವ ಇದ್ದಲ್ಲಿ ಸಂಸ್ಥೆ ಉತ್ತುಂಗಕ್ಕೇರಲಿದೆ ಎಂದು ಹೇಳಿದರು.

ಲಯನ್ಸ್ ಸಂಸ್ಥೆ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ. ಸೇವೆಯೇ ಧೈಯವನ್ನಾಗಿಸಿಕೊಂಡಿದ್ದು, ಇದನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ನೊಂದವರಿಗೆ ನೆರವಾಗಬೇಕು. ಅಲ್ಲದೇ ಈ ಮೂಲಕ ನಿಮ್ಮ ವ್ಯಾಪಾರ, ವಹಿವಾಟು, ನಾಯಕತ್ವ ಗುಣವನ್ನು ಸದಸ್ಯರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲಯನ್ಸ್ ಅಂತರರಾಷ್ಟ್ರೀಯ ಮಾಜಿ ನಿರ್ದೇಶಕರಾದ ಕೆ. ವಂಶಿಧರ್‌ಬಾಬು, ವಿ.ವಿ. ಕೃಷ್ಣ ರೆಡ್ಡಿ , ಮಾಜಿ ಜಿಲ್ಲಾ ಗವರ್ನರ್-317 ಕೆ. ದೇವೇಗೌಡ, ವಿವಿಧ ಲಯನ್ಸ್ ಸಂಸ್ಥೆಗಳ ಟಿ.ಎಚ್. ವೆಂಕಟೇಶ್, ಎನ್.ಸುಬ್ರಹ್ಮಣ್ಯ, ಲೋಕೇಶ್, ರಂಗರೆಡ್ಡಿ, ಗೋವರ್ಧನ್ ಶೆಟ್ಟಿ, ಹರಿಪ್ರಸಾದ್ ರೈ, ಸುಹೇಶ್ ಬೋರ್‌ಕರ್, ಡಾ ಶಶಿಧರ್ ಗಂಜಿಗಟ್ಟಿ, ರಾಜುಚಂದ್ರಶೇಖರ್, ಪ್ರತಾಪ್ ಯಾದವ್, ಎಚ್.ಎಂ.ತಾರಾನಾಥ್, ರಾಜೀವ್ ಕೋಟಿಯರ್, ರಾಜಶೇಖರ್ ಹಿರೇಮಠ್, ಕೆ. ಈಶ್ವರನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net