

ಮಂಗಳೂರು: ಲಯನ್ಸ್ ಇಂಟರ್ ನ್ಯಾಶನಲ್ ಜಿಲ್ಲೆ 317ಡಿ ಇದರ ವತಿಯಿಂದ ‘ದೀಪಾಮೃತ’ ಲಯನ್ಸ್ ದೀಪಾವಳಿ ಸಂಭ್ರಮವನ್ನು ಪ್ರಧಾನ ಸಂಯೋಜಕ ಕೆ.ರಾಜೇಶ್ ಶೆಟ್ಟಿ ಶಬರಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮಂಗಳೂರಿನ ಕಲ್ಲಾಪು ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಆಯೋಜಿಸಲಾಯಿತು.
ಲಯನ್ಸ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿ’ಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವ ಸಂತೋಷ ಭಾರತಿ ಸ್ವಾಮೀಜಿ ದೀಪಾವಳಿ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ನಿಕಟಪೂರ್ವ ಲಯನ್ಸ್ ಜಿಲ್ಲಾ ಗವರ್ನರ್ ಎಸ್. ಸಂಜೀತ್ ಶೆಟ್ಟಿ, ಲಯನ್ಸ್ ಜಿಲ್ಲಾ ಪ್ರಥಮ ಉಪ ಗವರ್ನರ್ ಬಿ.ಎಂ.ಭಾರತಿ, ದ್ವಿತೀಯ ಉಪ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಅವರು ಶುಭಾಶಂಸನೆಗೈದರು.
ಲಯನ್ಸ್ ಕ್ಲಬ್ ವತಿಯಿಂದ ಪದ್ಮಾವತಿ ಕಲ್ಮಂಜ ಅವರಿಗೆ 50 ಸಾವಿರ ರೂ. ಗೃಹ ನಿರ್ಮಾಣ ನಿಧಿ ಹಾಗೂ ಹರೀಶ್ ಆಚಾರ್ಯ ಅವರಿಗೆ 10 ಸಾವಿರ ರೂ. ಗೃಹ ದೀಪ ಜ್ಯೋತಿ ನಿಧಿ ವಿತರಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಂದಿನಿ ರಘುಚಂದ್ರ ಅವರನ್ನು ಸನ್ಮಾನಿಸಲಾಯಿತು. ಸ್ಮಿತಾ ಮೆಲ್ವಿನ್ ಡಿಸೋಜ, ರಮ್ಯಾ ರಾಜೇಶ್ ಶೆಟ್ಟಿ, ಲಯನ್ಸ್ ಜಿಲ್ಲಾ ಪದಾಧಿಕಾರಿಗಳು, ಸಂಘಟನಾ ಸಮಿತಿಯ ಸಂಯೋಜಕರು ಹಾಗೂ ಸಹಸಂಯೋಜಕರು ಉಪಸ್ಥಿತರಿದ್ದರು.
ದೀಪಾಮೃತದ ಪ್ರಧಾನ ಸಂಯೋಜಕ ರಾಜೇಶ್ ಶೆಟ್ಟಿ ಶಬರಿ ಸ್ವಾಗತಿಸಿದರು. ಮಂಜುಳಾ ಪಿ.ಶೆಟ್ಟಿ ಸ್ವಾಮೀಜಿಯನ್ನು ಪರಿಚಯಿಸಿದರು. ಸುಜಾತಾ ಶೆಟ್ಟಿ ವಂದಿಸಿದರು. ರಾಜೇಶ್ವರಿ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಶಕ್ತಿನಗರದ ‘ಸಾನ್ನಿಧ್ಯ’ ಭಿನ್ನ ಸಾಮರ್ಥ್ಯದ ಶಾಲೆಯ ಮಕ್ಕಳಿಂದ ‘ಕಲ್ಲುರ್ಟಿ-ಕಲ್ಕುಡ’ ತುಳುನಾಟಕ ಜರಗಿತು.