

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಯುವ ಸಮೂಹ ಅವಶ್ಯವಾದ ಸಮಯದಲ್ಲಿ ಸ್ವಯಂ ಪ್ರೇರಿತ ರಕ್ತದಾನಕ್ಕೆ ಮುಂದಾಗಬೇಕು ಎಂದು ಲಯನ್ಸ್‌ನ ಜಿಲ್ಲಾ ಮಾಜಿ ರಾಜ್ಯಪಾಲ ಲಯನ್ ದೀಪಕ್ ಸುಮನ್ ಸಲಹೆ ನೀಡಿದರು.
ನಗರದ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್‌ಸ್ಟಿಟ್ಯೂಷನ್ಸ್‌ನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸೇವಾ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಮಾತನಾಡಿದರು. ರಕ್ತದಾನದಂತಹ ಮಹತ್ವದ ಸೇವಾ ಚಟುವಟಿಕೆಯನ್ನು ಜೀವನಾಡಿಯಾಗಿಸಿಕೊಂಡಿರುವ ಲಯನ್ಸ್ ಸಂಸ್ಥೆ ಕರೊನಾ ಸಂದಿಗ್ಧದ ಕಾಲಘಟ್ಟದಲ್ಲಿ ಅಪಾರ ಸೇವೆ ಸಲ್ಲಿಸಿದೆ ಎಂದರು.
ಸಾಮಾಜಿಕ ಸೇವಾ ಕಾರ್ಯ ಸಂಘಟನೆಗಳ ಅವಿಭಾಜ್ಯ ಅಂಗವಾಗಬೇಕು. ಅಶಕ್ತ ಹಾಗೂ ಅವಶ್ಯಕತೆಯುಳ್ಳ ವಲಯಕ್ಕೆ ಸೇವೆ ಮೂಲಕ ನೆರವು ಒದಗಿಸುವುದು ಲಯನ್ಸ್ ಕ್ಲಬ್ ಧ್ಯೇಯವಾಗಿದೆ ಎಂದರು. ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, 2 ವರ್ಷಗಳ ಅವಧಿಯಲ್ಲಿ ದಾಖಲೆಯ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾವಿರಾರು ಫಲಾನುಭವಿಗಳಿಗೆ ಹಲವು ಸೌಲಭ್ಯ ತಲುಪಿಸಲಾಗಿದೆ. ಮುಂಬರುವ ದಿನಗಳಲ್ಲೂ ಸೇವಾ ಕಾರ್ಯ ಮುಂದುವರಿಯಬೇಕು ಎಂದರು.
ಜಿಲ್ಲಾ ರಾಜ್ಯಪಾಲ ಬಿ.ಎಸ್.ರಾಜಶೇಖರಯ್ಯ ಮಾತನಾಡಿ, ಮಧುಮೇಹ ತಪಾಸಣೆ, ಕಣ್ಣಿನ ತಪಾಸಣೆ, ಸಾಮಾಜಿಕ ಸೇವಾ ಕಾರ್ಯ, ಬಾಲ್ಯಾವಸ್ಥೆಯಲ್ಲಿ ಕಂಡು ಬರುವ ಕ್ಯಾನ್ಸರ್ ರೋಗದ ಕುರಿತು ಜಾಗೃತಿ, ಪಶು ಆರೋಗ್ಯ ರಕ್ಷಣೆ ಜಾಗೃತಿ ಸೇರಿ ಹಲವು ಸಾರ್ಥಕ ಕಾರ್ಯಕ್ರಮಗಳಲ್ಲಿ ಸಂಸ್ಥೆ ಗಣನೀಯವಾಗಿ ಗುರುತಿಸಿಕೊಂಡಿದೆ ಎಂದರು. ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಡಾ.ಎಂ.ಶ್ರೀನಿವಾಸರೆಡ್ಡಿ ಮಾತನಾಡಿ, ಮುಂದಿನ ದಿನಗಳಲ್ಲಿ ವಿನೂತನ ಸೇವಾ ಕಾರ್ಯ ಹಮ್ಮಿಕೊಳ್ಳಲು ಚಿಂತನೆ ನಡೆಸಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು.
ಪ್ರತಿಭಾನ್ವಿತ 6 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 6 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಐವರು ರೈತರಿಗೆ ಪಶು ಆಹಾರ ವಿತರಣೆ ಮಾಡಲಾಯಿತು. ವಲಯ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ಸಂಸ್ಥೆಯ ಕಾರ್ಯದರ್ಶಿ ಅರಸೇಗೌಡ, ಸಹ ಕಾರ್ಯದರ್ಶಿ ಎ.ಎಸ್.ಅರುಂಧತಿ, ಸಹಖಜಾಂಚಿ ಕೆ.ಸಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಡಾ.ಎಂ.ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ
ಎನ್.ಆರ್.ಮುಖೇಶ್, ಖಜಾಂಚಿ ಎಸ್.ರವಿಕುಮಾರ್, ಜಂಟಿ ಕಾರ್ಯದರ್ಶಿ
ಬಿ.ಎಸ್.ಅರುಂಧತಿ, ಉಪಾಧ್ಯಕ್ಷರಾಗಿ ಜೆ.ಆರ್.ರಾಕೇಶ್, ಕೆ.ಎಂ.ಮುನಿರಾಮೇಗೌಡ, ಪ್ರೊ.ಕೆ.ಆರ್.ರವಿಕಿರಣ್, ಟೇಲ್‌ಟ್ವಿಸ್ಟರ್ ಕೆ.ಮಂಜುನಾಥ್, ಟೇಮರ್ ಕೆ.ವಿಶ್ವನಾಥ್, ಮಾಕೆರ್ಂಟಿಂಗ್ ಮತ್ತು ಸಂವಹನ ಛೇರ್‌ಪರ್ಸನ್ ಟಿ.ಮಹಾಂತೇಶಪ್ಪ, ಎಲ್‌ಸಿಐಎಫ್ ಛೇರ್‌ಪರ್ಸನ್ ಎಲ್.ಎನ್.ಪ್ರದೀಪ್‌ಕುಮಾರ್, ಸರ್ವೀಸ್ ಕಮಿಟಿ ಛೇರ್‌ಪರ್ಸನ್
ಕೆ.ಎಚ್.ಅರಸೇಗೌಡ, ಸದಸ್ಯತ್ವ ಸಮಿತಿ ಛೇರ್‌ಪರ್ಸನ್
ಐ.ಎಂ.ರಮೇಶ್‌ಕುಮಾರ್, ಸ್ಕ್ರೀನಿಂಗ್ ಸಮಿತಿ ಛೇರ್‌ಪರ್ಸನ್ ವೈ.ಎಂ.ಹರ್ಷ, ದೃಷ್ಟಿ ಸಮಿತಿ ಛೇರ್ ಪರ್ಸನ್‌ಆಗಿ ಕೆ.ಸಿ.ನಾಗರಾಜ್ ನೇಮಕಗೊಂಡರು.