

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ಗೆ 2022-23ನೇ ಸಾಲಿನ ಅತ್ಯುತ್ತಮ ಲಯನ್ಸ್ ಸಂಸ್ಥೆ ಪುರಸ್ಕಾರ ಲಭಿಸಿದೆ ಎಂದು ಜಿಲ್ಲಾ ಪ್ರಾಂತಪಾಲ ಬಿ.ಎಸ್.ರಾಜಶೇಖರಯ್ಯ ತಿಳಿಸಿದರು.
ಹೆಬ್ಬಾಳದ ಯುಎಎಸ್ ಕ್ಯಾಂಪಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲ ಬಿ.ಎಸ್.ರಾಜಶೇಖರಯ್ಯ, ಅತ್ಯುತ್ತಮ ಲಯನ್ಸ್ ಕ್ಲಬ್ ಬ್ಯಾನರ್ ಅನ್ನು ಸಂಸ್ಥೆಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ಲಯನ್ಸ್ ಜಿಲ್ಲೆ 317ಎಫ್ ವ್ಯಾಪ್ತಿಯ 80 ಲಯನ್ಸ್ ಸಂಸ್ಥೆಗಳ ಪೈಕಿ ಸೇವಾ ಹಾಗೂ ಆಡಳಿತಾತ್ಮಕ ಕಾರ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 16 ಮಹತ್ವದ ಪಾರಿತೋಷಕ ಪಡೆದಿದೆ. ಸತತ 2 ನೇ ಬಾರಿ ಅತ್ಯುತ್ತಮ ಲಯನ್ಸ್ ಕ್ಲಬ್ ಪುರಸ್ಕಾರ ಪಡೆಯುತ್ತಿರುವುದು ಮಹತ್ವದ ಸಾಧನೆಯಾಗಿದೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆ 19ನೇ ಸ್ಥಾನದಲ್ಲಿರುವುದು ವಿಶೇಷವಾಗಿದೆ ಎಂದರು.
1 ವರ್ಷದಲ್ಲಿ 7 ಲಕ್ಷ ಫಲಾನುಭವಿಗಳು: ಕ್ಲಬ್ ಮೂಲಕ ಆಯೋಜಿಸಲಾದ ವಿವಿಧ ಸೇವಾ ಚಟುವಟಿಕೆಗಳಲ್ಲಿ 7ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ತಲುಪಲಾಗಿದೆ. 1 ವರ್ಷದಲ್ಲಿ 581 ಕಾರ್ಯಕ್ರಮ ಆಯೋಜಿಸಿದ ಹೆಗ್ಗಳಿಕೆಗೂ ಕ್ಲಬ್ ಪಾತ್ರವಾಗಿದೆ ವಿವಿಧ ಸೇವಾ ಕಾರ್ಯಗಳಿಗೆ 36.54 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದರು.
16 ಪುರಸ್ಕಾರ ಪ್ರದಾನ: ಅಧ್ಯಕ್ಷ ಎಲ್.ಎಲ್.ಪ್ರದೀಪ್‌ಕುಮಾರ್ ಅವರಿಗೆ ಅತ್ಯುತ್ತಮ ಲಯನ್ಸ್ ಅಧ್ಯಕ್ಷ ಪ್ಲಾಟಿನಮ್ ಪುರಸ್ಕಾರ, ಎಂ.ಆರ್.ಶ್ರೀನಿವಾಸ್ ಅವರಿಗೆ ಅತ್ಯುತ್ತಮ ವಲಯ ಅಧ್ಯಕ್ಷ ಹಾಗೂ ಕ್ಲಬ್ ವಿಸ್ತರಣೆಯ ಪ್ಲಾಟಿನಮ್ ಗೌರವ, ಜೆ.ರಾಜೇಂದ್ರ ಅವರಿಗೆ ಅತ್ಯುತ್ತಮ ಜಿಲ್ಲಾ ಕೃಷಿ ಪ್ರೋತ್ಸಾಹ ಸಂಯೋಜಕ ಪ್ಲಾಟಿನಮ್ ಪ್ರಶಸ್ತಿ, ಕೆ.ವಿ.ಪ್ರಭುಸ್ವಾಮಿ ಅವರಿಗೆ ಅತ್ಯುತ್ತಮ ಲಯನ್ ಮಾರ್ಗದರ್ಶಕ ಪ್ಲಾಟಿನಮ್ ಗೌರವ, ಅರುಂಧತಿ ರಾಕೇಶ್ ಅವರಿಗೆ ಉತ್ತಮ ಕಾರ್ಯದರ್ಶಿ ಡೈಮಂಡ್ ಪುರಸ್ಕಾರ, ಕೆ.ಸಿ.ನಾಗರಾಜ್ ಅವರಿಗೆ ಸಹ ಖಜಾಂಚಿ ಗೋಲ್ಡ್ ಪ್ರಶಸ್ತಿ ಸೇರಿ16 ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು.