ನಾಲ್ವಡಿ ಲಯನ್ಸ್‌ನಿಂದ ಆಟಗಾರರಿಗೆ ಶೂ ವಿತರಣೆ: ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ

Lions distribute shoes to players Mandya
Published on

ಮಂಡ್ಯ: ತುಮಕೂರಿನಲ್ಲಿ ನಡೆಯುತ್ತಿರುವ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಜಿಲ್ಲೆಯ ವಿದ್ಯಾರ್ಥಿನಿಯರ ತಂಡಕ್ಕೆ ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್ ವತಿಯಿಂದ ಶೂಗಳನ್ನು ವಿತರಿಸಿ ಶುಭ ಕೋರಲಾಯಿತು.

ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಕಬಡ್ಡಿ ಕ್ರೀಡಾಪಟುಗಳಿಗೆ ಶೂ ವಿತರಿಸಿ ಮಾತನಾಡಿದ ಲಯನ್ಸ್ ಜಿಲ್ಲೆ 317 ನ ಜಿಲ್ಲಾ ಸಂಪುಟ ಅಪರ ಕಾರ್ಯದರ್ಶಿ ಹನುಮಂತಯ್ಯ, ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಜತೆಗೆ ಪಠ್ಯದಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗೂ ನೀಡಬೇಕು. ಇತ್ತೀಚಿನ ವಷರ್ದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ವಿಫುಲವಾಗಿ ಅವಕಾಶ ದೊರೆಯುತ್ತಿವೆ ಎಂದರು.

ಕಬಡ್ಡಿ ನಮ್ಮ ನೆಲದ ಆಟ. ಮಾತ್ರವಲ್ಲದೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಆಟಗಾರರಿಗೆ ಬ್ಯಾಂಕಿಂಗ್, ರೈಲ್ವೆ, ಕೈಗಾರಿಕೆ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗಾವಕಾಶ ದೊರೆಯುತ್ತಿವೆ. ಕಬಡ್ಡಿ ಆಟಗಾರರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸರ್ಕಾರ ಜತೆಗೆ ಸಂಘ ಸಂಸ್ಥೆ ಮಾಡುತ್ತಿವೆ. ಕಬಡ್ಡಿಯು ಪ್ರಸಿದ್ಧಿ ಜತೆಗೆ ಆರ್ಥಿಕ ಬಲವನ್ನು ಆಟಗಾರರಿಗೆ ಒದಗಿಸುತ್ತದೆ. ಕಬಡ್ಡಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನಿಮ್ಮ ಅದೃಷ್ಟ. ಸಿಕ್ಕ ಅವಕಾಶವನ್ನು ಬಳಸಿಕೊಂಡು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಜಯಶಾಲಿಯಾಗಿ ರಾಷ್ಟ್ರಮಟ್ಟದ ಆಡುವ ಅವಕಾಶ ನಿಮ್ಮದಾಗಲಿ. ಈ ಮೂಲಕ ತಾವು ಪ್ರತಿನಿಧಿಸುವ ಜಿಲ್ಲೆ, ಶಾಲಾ ಕಾಲೇಜು ಹಾಗೂ ಪಾಲಕರಿಗೆ ಒಳ್ಳೆಯ ಹೆಸರು ತನ್ನಿ ಎಂದು ಹೇಳಿದರು

ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್‌ನ ಲಯನ್ ಬಿ.ಲಿಂಗೇಗೌಡ, ಸಂಸ್ಕಾರ ಕಬಡ್ಡಿ ಆಕಾಡೆಮಿ ಅಧ್ಯಕ್ಷ ಬೇವಿನಹಳ್ಳಿ ಚಂದ್ರಶೇಖರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net