

ಬೆಳ್ತಂಗಡಿ: ಉಜಿರೆಯಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ 108 ಎಕರೆ ಜಮೀನು ಗುರುತಿಸಲಾಗಿತ್ತಾದರೂ ಸರ್ಕಾರ ಬದಲಾವಣೆಯಿಂದಾಗಿ ಯೋಜನೆ ನನೆಗುದಿಗೆ ಬಿದ್ದಿದೆ. 2 ಸಾವಿರಕ್ಕೂ ಮಿಕ್ಕಿದ ಜನರಿಗೆ ಉದ್ಯೋಗ ಸೃಷ್ಟಿ ಸಾಧ್ಯತೆ ಇತ್ತು. ಲಯನ್ಸ್‌ನ ಉದ್ಯಮಿಗಳು ತಮ್ಮ ಉದ್ಯಮ ಮೂಲಕ ಉದ್ಯೋಗ ಸೃಷ್ಟಿಗೆ ಅವಕಾಶ ನೀಡಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಉಜಿರೆಯಲ್ಲಿ ಲಯನ್ಸ್ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಮುಖಪುಟ ಅನಾವರಣಗೊಳಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಹತ್ತಾರು ಜನ ಸೇರಿ ಸಂಸ್ಥೆ ಕಟ್ಟುತ್ತಾರೆ. ಆದರೆ ಅದನ್ನು 50 ವರ್ಷ ಮುನ್ನಡೆಸಿರುವುದೇ ಸಾಹಸ ಎಂದರು.
ಲಯನ್ಸ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜಾ ಮಾತನಾಡಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಜಿಲ್ಲೆಯ ಸೀನಿಯರ್ ಕ್ಲಬ್ ಹಾಗೂ ಎಲ್ಲರಿಗೂ ಅಚ್ಚುಮೆಚ್ಚಿನ ಕ್ಲಬ್. ಈ ವರ್ಷದ ಅಧ್ಯಕ್ಷರು ಈ ಜಿಲ್ಲೆಯಲ್ಲಿ ಸಂಸ್ಥೆಯ ಹೆಸರನ್ನು ಅತಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರ ಸಮಾಜ ಸೇವೆ ನೋಡಿ ನಾವು ಕಲಿತಿದ್ದೇವೆ. ಗವರ್ನರ್ ಧ್ಯೇಯದಂತೆ ಎಲ್ಲ ಸದಸ್ಯರ ಉತ್ಸಾಹದಿಂದ 500 ಕಾರ್ಯಕ್ರಮ ಮಾಡಿದ್ದೇವೆ ಎಂದರು.
ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೋ, ಜಿಲ್ಲಾ ಕಾರ್ಯದರ್ಶಿ ಓಸ್ವಾಲ್ಡ್ ಡಿಸೋಜ, ಕೋಶಾಧಿಕಾರಿ ಸುಧಾಕರ ಶೆಟ್ಟಿ, ತಾಲೂಕು ಕೋಶಾಧಿಕಾರಿ ಶುಭಾಷಿಣಿ, ನಿಕಟಪೂರ್ವ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಳ್ಮ, ನಿಯೋಜಿತ ಅಧ್ಯಕ್ಷ ದೇವದಾಸ ಶೆಟ್ಟಿ ಹಿಬರೋಡಿ, ಸವಿಯಾ ಯು.ಶೆಟ್ಟಿ, ಲಿಯೋ ಕ್ಲಬ್ ಅಧ್ಯಕ್ಷೆ ಅಪ್ಸರಾ ಗೌಡ, ವಸಂತ ಶೆಟ್ಟಿ, ಅಶ್ರಫ್ ಆಲಿಕುಞಿ ಮುಂಡಾಜೆ, ಧರಣೇಂದ್ರ ಕೆ.ಜೈನ್, ದತ್ತಾತ್ರೇಯ ಗೊಲ್ಲ, ಪಾಲಾಕ್ಷ ಸುವರ್ಣ, ಸುರೇಶ್ ಶೆಟ್ಟಿ ಲಾಯಿಲ, ಅಮಿತಾನಂದ ಹೆಗ್ಡೆ ಉಪಸ್ಥಿತರಿದ್ದರು.
ಕಟ್ಟಡ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಸುವರ್ಣ ಮಹೋತ್ಸವ ಅವಲೋಕನ ನಡೆಸಿದರು. ಪ್ರಕಾಶ ಶೆಟ್ಟಿ ನೊಚ್ಚ ನಿರೂಪಿಸಿದರು. ಕಾರ್ಯದರ್ಶಿ ಅನಂತಕೃಷ್ಣ ವಂದಿಸಿದರು.
ಸ್ಥಾಪಕ ಸದಸ್ಯರಾದ ಎಂ.ಜಿ.ಶೆಟ್ಟಿ ಮತ್ತು ವಿ.ಆರ್.ನಾಯಕ್, ಉದ್ಯಮಿ ಮೋಹನ್ ಕುಮಾರ್ ಉಜಿರೆ, ಡಾ.ಕಾಂಚೋಡು ಗೋಪಾಲಕೃಷ್ಣ ಭಟ್, ಡಾ.ಕೆ.ಜಿ ಪಣಿಕ್ಕರ್ ಮತ್ತು ಗಣೇಶ್ ಬಿ.ಎಲ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಉಮೇಶ್ ಶೆಟ್ಟಿ ಮತ್ತು ಸವಿತಾ ದಂಪತಿಯನ್ನು ಸನ್ಮಾನಿಸಲಾಯಿತು. ಉಜಿರೆ ರತ್ನವರ್ಮ ಕ್ರೀಡಾಂಗಣದಿಂದ ಮೆರವಣಿಗೆ ನಡೆಯಿತು. ಸಂಗೀತ ರಸಮಂಜರಿ, ಲಿಯೋ ಕ್ಲಬ್ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಳಿಕ ನಾಟಕ ಪ್ರದರ್ಶನ ನಡೆಯಿತು.