ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ಕೊಡುಗೆ

Gok lions
Published on

ಗೋಕರ್ಣ: ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ವತಿಯಿಂದ ಇಲ್ಲಿನ ಸಾಣೆಕಟ್ಟೆಯ ಸದ್ಗುರು ಶ್ರೀ ನಿತ್ಯಾನಂದ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿವಿಧ ವೈಜ್ಞಾನಿಕ ಪಾಠೋಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕ್ಲಬ್ ಅಧ್ಯಕ್ಷ ದೇವಾನಂದ ಗಾಂವಕರ ಮಾತನಾಡಿ, ಸರ್ಕಾರಿ ಅನುದಾನಿತ ಶಾಲೆಗಳು ಉತ್ತಮಗೊಳ್ಳಲು ವಿದ್ಯಾರ್ಥಿಗಳ ಸಾಧನೆಗೆ ವಿವಿಧ ಅನುಕೂಲಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕ್ಲಬ್ ವತಿಯಿಂದ ಒದಗಿಸಲಾದ ಪಾಠೋಪಕರಣಗಳನ್ನು ಸದ್ಬಳಕೆ ಮಾಡಿಕೊಂಡು ಶ್ರೇಷ್ಠ ಫಲಿತಾಂಶ ಪಡೆಯುವಂತೆ ಹಾರೈಸಿದರು.

ದಾನಿಗಳಲ್ಲೊಬ್ಬರಾದ ಡಾ .ಕರುಣಾಕರ ನಾಯ್ಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ ಮಾತನಾಡಿ, ವಿದ್ಯಾರ್ಥಿಗಳು ಉಪಕರಣಗಳ ಸಹಾಯದಿಂದ ಹೆಚ್ಚಿನ ಅಂಕ ಪಡೆದು ಶಾಲೆಗೆ ಕೀರ್ತಿ ತರುವಂತೆ ಕೋರಿದರು.

ಕ್ಲಬ್ ಸದಸ್ಯರಾದ ಸುಬ್ರಹ್ಮಣ್ಯ ಉಡುಪಿ, ಸಂಜಯ ಅರುಂದೇಕರ್, ಮಾಜಿ ಅಧ್ಯಕ್ಷ ಮಂಜುನಾಥ ಹರಿಕಂತ್ರ, ಕಾರ್ಯದರ್ಶಿ ಮಂಜುನಾಥ ನಾಯಕ, ಖಜಾಂಚಿ ಗಿರಿಧರ ಆಚಾರ್ಯ, ಗಣಪತಿ ನಾಯಕ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ಶಾರದಾ ನಾಯಕ, ಶಿಕ್ಷಕಿ ಹೇಮಲತಾ ಚೌಡನಕರ್, ಶಿಕ್ಷಕ ಶ್ರೀನಿವಾಸ ನಾಯಕ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net