

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಲಯನ್ಸ್ ಕ್ಲಬ್ ಸದಸ್ಯರು ಕೈಗೊಳ್ಳುವ ಸಮಾಜಸೇವೆ, ಮಾನವೀಯ ಸೇವೆ ಪ್ರಶಂಸನೀಯ. ಅವರು ಸರ್ಕಾರದ ಜತೆ ಕೈಜೋಡಿಸಿ ಇನ್ನೂ ಅನೇಕ ಸೇವಾ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಕರೆ ನೀಡಿದರು.
ಲಯನ್ಸ್ ಕ್ಲ ಬ್ ಆಫ್ ಹುಬ್ಬಳ್ಳಿ ಪರಿವಾರದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ನೈಋತ್ಯ ರೈಲ್ವೆ ಹಿರಿಯ ವಿಭಾಗೀಯ ವ್ಯವಸ್ಥಾಪಕ ಸಂತೋಷ ಹೆಗಡೆ ಇದ್ದರು.
ಲಯನ್ಸ್ ಪರಿವಾರದ ನೂತನ ಅಧ್ಯಕ್ಷರಾಗಿ ಡಾ. ಸಂಜಯ ಗಣೇಶಕರ, ಕಾರ್ಯದರ್ಶಿಯಾಗಿ ಆನಂದ ಭೂಮರಡ್ಡಿ, ಖಜಾಂಚಿಯಾಗಿ ಅಶೋಕ ಗೋಯಲ್ ಹಾಗೂ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ನಾಡಗೇರ ಪ್ರತಿಜ್ಞಾವಿಧಿ ಬೋಧಿಸಿದರು. ಆನಂದ ಮೆಹರವಾಡೆ, ಡಾ. ಶಶಾಂಕ ಕರಿ, ಗಿರೀಶ ಸುಂಕದ, ವಿಕ್ರಮ ಟೆಂಗಿನಕಾಯಿ ಲಯನ್ಸ್ ಪರಿವಾರದ ಸದಸ್ಯತ್ವ ಸ್ವೀಕರಿಸಿದರು.
ಲಯನ್ಸ್ ಸೇವಾ ಚಟುವಟಿಕೆಗಳಿಗೆ ರಮೇಶ ನಹಾರ್ 1.51 ಲಕ್ಷ ರೂ. ಹಾಗೂ ಕೆ. ರಮಣಮೂರ್ತಿ 51,000 ರೂ. ದೇಣಿಗೆ ನೀಡಿದರು.
ಹಿರಿಯ ವೈದ್ಯರಾದ ಡಾ. ಆರ್.ಎನ್. ಜೋಶಿ, ಡಾ. ಎಸ್.ಕೆ. ಜೋಶಿ, ಡಾ. ಎನ್.ಆರ್. ಪಾಟೀಲ, ಡಾ. ವಿಜಯ ಜಾಯದೆ, ಡಾ. ಸುರೇಶ ದುಗಾಣಿ, ಡಾ. ಸಿ.ಎಸ್. ಪಾಟೀಲ, ಡಾ. ಡಿ. ವಿ. ನಾಡಗೀರ, ಡಾ. ಕೋಟಬಾಗಿ, ಡಾ. ರಾಘವೇಂಧ್ರ ತೋಪಖಾನೆ, ಡಾ. ಅಭಿಷೇಕ ಕವಳೆಕರ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಪರಿವಾರದ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಸ್ವಾಗತಿಸಿ ವರ್ಷ ಪೂರ್ತಿ ಆಯೋಜಿಸಿರುವ ಚಟುವಟಿಕೆಗಳ ಕುರಿತು ವಿವರಿಸಿದರು.
ನಿಕಟಪೂರ್ವ ಅಧ್ಯಕ್ಷ ಶ್ರೀಕಾಂತ ಕರಿ ಅಧ್ಯಕ್ಷತೆ ವಹಿಸಿದ್ದರು. ಸಂತೋಷ ಪಾಟೀಲ ವಾರ್ಷಿಕ ವರದಿ ವಾಚಿಸಿದರು. ನವಿತಾ ಮೋದಿ ಹಾಗೂ ಪದ್ಮಾ ಭೂಮರಡ್ಡಿ ನಿರೂಪಿಸಿದರು.