

ಕುಶಾಲನಗರ:
ಲಯನ್ಸ್ ಸಂಸ್ಥೆ ಅತ್ಯಂತ ದೊಡ್ಡ ಸೇವಾ ಸಂಸ್ಥೆಯಾಗಿದ್ದು, ವಿಶ್ವದ ವಿವಿಧ ದೇಶಗಳಲ್ಲಿ ಸುಮಾರು 1520 ಕಣ್ಣಿನ ಆಸ್ಪತ್ರೆಗಳನ್ನು ಸ್ಥಾಪಿಸುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದೆ ಎಂದು ಲಯನ್ಸ್ ಕ್ಲಬ್ ಮಾಜಿ ಕ್ಷೇತ್ರಪಾಲ ಎಂ.ಬಿ. ಸದಾಶಿವ ಹೇಳಿದರು. ಇಲ್ಲಿನ ಗೌಡ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಲಯನ್ಸ್ ಕ್ಲಬ್ ಏರ್ಪಡಿಸಿದ್ದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ, ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ಸಮಾಜದಲ್ಲಿನ ಪ್ರತಿಯೊಬ್ಬರೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಲಯನ್ಸ್ ಕ್ಲಬ್ ವೇದಿಕೆಯಾಗಿದೆ. ಉತ್ತಮ ನಾಯಕತ್ವ ಗುಣ, ಶಿಸ್ತು ಲಯನ್ಸ್ ಸಂಸ್ಥೆ ಯಿಂದ ಬರುತ್ತದೆ. ಸರ್ಕಾರದ ಯೋಜನೆ ತಲುಪಲಾಗದ ಸ್ಥಳಗಳಿಗೆ, ಫಲಾನುಭವಿಗಳಿಗೆ ಲಯನ್ಸ್ ನೆರವಾಗುತ್ತದೆ. ಸೇವೆಯೇ ಮುಖ್ಯ ಧ್ಯೇಯವಾಗಿಸಿಕೊಂಡಿರುವ ಲಯನ್ಸ್ ಸಂಸ್ಥೆ ಬಡವರು, ಅಶಕ್ತರ ಪಾಲಿನ ಆಶಾಕಿರಣವಾಗಿದೆ. ಆರೋಗ್ಯ ಉಚಿತ ತಪಾಸಣೆ, ದಂತ ಚಿಕಿತ್ಸೆ ತಪಾಸಣಾ ಶಿಬಿರ, ನೇತ್ರ ಉಚಿತ ಶಸ್ತ್ರ ಚಿಕಿತ್ಸೆ, ಶಾಲಾ-ಕಾಲೇಜುಗಳಿಗೆ ಅಗತ್ಯ ಪರಿಕರಗಳನ್ನು ನೀಡುವುದು, ಅಂಗವಿಕಲರ ಶಾಲೆಗಳ ಅಭಿವೃದ್ಧಿಗೆ ಸಹಾಯ, ಬಡ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಸಂಸ್ಥೆಯು ಬೆಳಕಾಗುತ್ತಿದೆ ಎಂದರು.
ನಿರ್ಗಮಿತ ಕ್ಲಬ್ ಅಧ್ಯಕ್ಷ ದೇವರಗುಂಡ ಪ್ರವೀಣ್ ಸೋಮಪ್ಪ ಅವರು ನೂತನ ಅಧ್ಯಕ್ಷ ಎನ್.ಟಿ. ನಾರಾಯಣ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ ಮಾತನಾಡಿ, ನನ್ನ ಅಧ್ಯಕ್ಷೀಯ ಅವಧಿಯಲ್ಲಿ ಸಂಘದ ಸರ್ವ ಸದಸ್ಯರ ಸಹಕಾರದಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದ್ದು ಮುಂದಿನ ಅಧ್ಯಕ್ಷರಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷ ಎನ್.ಟಿ. ನಾರಾಯಣ ಮಾತನಾಡಿದರು. ಈ ಸಂದರ್ಭ ಲಯನ್ಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಗೀತಾರಾವ್, ವಿಭಾಗೀಯ ಅಧ್ಯಕ್ಷ ಕನ್ನಿಕ ಅಯ್ಯಪ್ಪ, ವಲಯ ಅಧ್ಯಕ್ಷ ವಿ.ಎಸ್. ಸುಮನ್ ಬಾಲಚಂದ್ರ, ಕೆ.ಎ. ಮಹಾದೇವಪ್ಪ, ಕನ್ನಂಡ ಬೊಳ್ಳಪ್ಪ, ಕಾರ್ಯಕ್ರಮ ಸಂಯೋಜಕ ಕೊಡಗನ ಹರ್ಷ, ನೂತನ ಕಾರ್ಯದರ್ಶಿ ಎಂ.ಜಿ.ಕಿರಣ್, ಖಜಾಂಜಿ ಡಾ. ಶರತ್ ಕುಮಾರ್, ಮಾಜಿ ಅಧ್ಯಕ್ಷ ಕೆ.ಎಸ್. ಸತೀಶ್ ಕುಮಾರ್, ಟಿ.ಕೆ. ರಾಜಶೇಖರ್, ಎಂ.ಎಸ್. ಚಿಣ್ಣಪ್ಪ, ಸಿ.ಆರ್.ನಾಗರಾಜು ಪಾಲ್ಗೊಂಡಿದ್ದರು. ಹರೀಶ್, ಜೀವನ್ ಕುಮಾರ್ ನೂತನ ಸದಸ್ಯರಾಗಿ ಸೇರ್ಪಡೆಗೊಂಡು ಪ್ರತಿಜ್ಞೆ ಸ್ವೀಕರಿಸಿದರು.