

ಮಂಗಳೂರು : ದೇಶದಲ್ಲಿ ವಿವಿಧ ಕಾರಣದಿಂದ ಪ್ರತಿ ವರ್ಷ ಲಕ್ಷಾಂತರ ಮಂದಿ ಶಾಶ್ವತ ಅಂಗ ವಿಕಲರಾಗುತ್ತಾರೆ.ಈ ಅಂಗವಿಕಲತೆ ಆರ್ಥಿಕವಾಗಿ ಬಡವರಾಗಿರುವವರನ್ನು ಇನ್ನಷ್ಟು ಕಾಡುತ್ತದೆ .ಇಂತಹ ಜನರಿಗೆ ಕೃತಕ ಅಂಗಗಳ ವಿತರಣೆಯನ್ನು ದೀರ್ಘ ಕಾಲದಿಂದ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ ಎಂದು ಪಶ್ಚಿಮ ವಲಯದ ಐಜಿಪಿ ಡಾ.ಎಂ.ಬಿ. ಬೋರ ಲಿಂಗಯ್ಯ ಹೇಳಿದರು.
ಅವರು ಲಯನ್ಸ್ ಸಂಸ್ಥೆಯ ವತಿಯಿಂದ ನಗರದ ವೆನ್ಲಾಕ್ ಆಸ್ಪತ್ರೆಯ ಲಿಂಬ್ ಸೆಂಟರ್‌ನಲ್ಲಿ ಶುಕ್ರವಾರ ಕೃತಕ ಅಂಗಾಂಗ ತಯಾರಿಯ ಸುಧಾರಿತ ಎಂಡೊ ಪ್ರೊಸ್ಥೆಟಿಕ್ ಸೆಂಟರ್ ಉದ್ಘಾಟಿಸಿ ಅವರು ಮಾತನಾಡಿದರು.
ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್ ಕೇಂದ್ರದ ಅಧ್ಯಕ್ಷ ಡಾ.ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ ‘ದೇಶದಲ್ಲಿ ಮುಂಬೈ, ದೆಹಲಿ, ಕೊಲ್ಕತ್ತಾ, ಹೊರತು ಪಡಿಸಿದರೆ ಮಂಗಳೂರಿನಲ್ಲಿ ಕೃತಕ ಅವಯವಗಳನ್ನು ನೀಡುವ ಲಿಂಬ್ ಸೆಂಟರ್ ಲಯನ್ಸ್ ಸಂಸ್ಥೆಯ ಸಹಕಾರದೊಂದಿಗೆ 49 ವರ್ಷಗಳ ಹಿಂದೆ ಆರಂಭಿಸಲಾಗಿದೆ.ಇದುವರೆಗೆ ಸುಮಾರು 80 ಸಾವಿರ ಜನರಿಗೆ ಕೃತಕ ಅಂಗಾಂಗಳನ್ನು ನೀಡಲಾಗಿದೆ ಈಗ ಈ ಕೇಂದ್ರ ಮೇಲ್ದರ್ಜೆಗೆ ಏರಿಸುವ ಮೂಲಕ ಇನ್ನಷ್ಟು ಜನರಿಗೆ ನೆರವಾಗಲಿದೆ ಎಂದರು.
ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜೆಸಿಂತಾ ಡಿಸೋಜಾ ಮಾತನಾಎಇ ‘ ಡಾ.ಶಾಂತಾರಾಮ ಶೆಟ್ಟಿಯವರ ನೇತೃತ್ವದಈ ಲಿಂಬ್ ಸೆಂಟರ್‌ನಿಂದ ಅಂಗಾಂಗ ಕಳೆದು ಕೊಂಡ ಬಡವರು ತಮ್ಮ ಬದುಕಿನಲ್ಲಿ ನವಚೇತನ ಪಡೆಯುವಂತಾಗಿದೆ ಎಂದರು.
ಲಯನ್ಸ್ ಗವರ್ನರ್ ಮೆಲ್ವಿನ್ ಡಿಸೋಜಾ, ಮಾಜಿ ಲಯನ್ಸ್ ಗವರ್ನರ್‌ಗಳಾದ ವಸಂತ ಶೆಟ್ಟಿ ,ಸಂಜಿತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಂಗಳೂರು ಲಯಮ್ಸ್ ಕ್ಲಬ್ ಅಧ್ಯಕ್ಷ ಶೀನ ಪೂಜಾರಿ, ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್‌ನ ಸಂಚಾಲಕ ಡಾ.ಕೆ.ಆರ್. ಕಾಮತ್,, ವ್ಯವಸ್ಥಾಪಕ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಳೀಧರ ಲಮಾಣಿ ವಂದಿಸಿದರು.
ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ವೆನ್ಲಾಕ್‌ನ ಲಿಂಬ್ ಸೆಂಟರ್ ವತಿಯಿಂದ ಕೃತಕ ಅಂಗಾಂಗಗಳನ್ನು ವಿತರಿಸಲಾಯಿತು.