

ಹಾನಗಲ್ಲ: ಬೇಡ್ತಿ-ವರದಾ ನದಿ ಜೋಡಿಸಿ, ಹನಿ ನೀರಾವರಿ ತಾರತಮ್ಯ ನಿಲ್ಲಿಸಿ, ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಗೊಳಿಸಿ ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದವರು ಶನಿವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕೋತಂಬರಿ ಮಾತನಾಡಿ, ರೈತರ ಪರ ಎಂದು ಹೇಳುವ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ರೈತರಿಗೆ ನೀರಾವರಿ ಯೋಜನೆ ಕೊಡಿ, ರೈತರು ಎಲ್ಲದಕ್ಕೂ ಸರ್ಕಾರಕ್ಕೆ ಕೈ ಚಾಚುವಂತಾಗಬಾರದು. ವರದಾ-ಬೇಡ್ತಿ ನದಿ ಜೋಡಣೆಯಿಂದ 4 ಜಿಲ್ಲೆಗಳ ರೈತರಿಗೆ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಸರ್ಕಾರದ ಪ್ರತಿನಿಧಿಗಳು ಹನಿ ನೀರಾವರಿ ಯೋಜನೆಯಲ್ಲಿ ತಾರಮತ್ಯ ಮಾಡುತ್ತಿರುವುದು ವಿಷಾದನೀಯ. ಹನಿ ನೀರಾವರಿಯನ್ನು ರೈತರು ಪಡೆಯಲಾಗದಂತೆ ಯೋಜನೆಗಳನ್ನು ಹೆಸರಿಗೆ ಮಾತ್ರ ಘೊಷಣೆ ಮಾಡುವುದು ಸರಿಯಲ್ಲ ಎಂದರು.
ಮನವಿಯಲ್ಲಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು, ಕೂಸನೂರ ಏತ ನೀರಾವರಿ ಆರಂಭಿಸಿ, ರೈತರ ಪಂಪ್ಸೆಟ್ಗಳಿಗೆ ಮೊದಲಿನಂತೆ ಆರ್.ಆರ್. ಸಂಖ್ಯೆ ನೀಡಿ ಉಚಿತ ವಿದ್ಯುತ್ ಪೂರೈಸಬೇಕು. ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಒತ್ತುವರಿಯಾದ ಜಮೀನನ್ನು ಕಾನೂನು ಬಾಹೀರವಾಗಿ ಉಳುಮೆಗೆ ನೀಡಿರುವುದನ್ನು ಹಿಂಪಡೆಯಬೇಕು. ಉತಾರದಲ್ಲಿನ ಸರಕಾರ, ಸರಕಾರಿ ಎಂಬ ಸಮಸ್ಯೆ ಬಗೆಹರಿಸಬೇಕು. ಕೆರೆಗಳ ಅಕ್ರಮ ಒತ್ತುವರಿ ತೆರವುಗೊಳಿಸಬೇಕು. ಸಾಲಕ್ಕಾಗಿ ರೈತರ ಆಸ್ತಿ, ಟ್ರ್ಯಾಕ್ಟರ್ ಜಪ್ತಿ ನಿಲ್ಲಿಸಬೇಕು. ಅತಿವೃಷ್ಟಿಗೆ ಹಾಳಾದ ಪ್ರದೇಶದ ರೈತರಿಗೆ ಸಾಲ ಮನ್ನಾ ನೀಡಿ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ರ್ಬಾ, ತಾಲೂಕು ಅಧ್ಯಕ್ಷ ಸದಾನಂದಗೌಡ ಪಾಟೀಲ, ರೈತ ಮುಖಂಡರಾದ ಪ್ರಕಾಶ ಮಾಸಣಗಿ, ಬಸು ಗಾಣಿಗೇರ, ಹನುಮಂತಪ್ಪ ಕೋಣಕೊಪ್ಪ, ನಾರಾಯಣ ಈಳಿಗೇರ, ಮಲಕಪ್ಪ ಕೋತಂಬರಿ, ಪ್ರಭು ಕಡಕೋಳ ಇತರರಿದ್ದರು.