

ಹಾನಗಲ್ಲ: ವರದಾ-ಬೇಡ್ತಿ ನದಿ ಜೋಡಣೆಗೆ ಮೊದಲ ಆದ್ಯತೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕರ್ನಾಟಕದ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ವರದಾ-ಬೇಡ್ತಿ ನದಿ ಜೋಡಣಾ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಆಗ್ರಹಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹಾವೇರಿ, ಗದಗ ಕೊಪ್ಪಳ ಸೇರಿದಂತೆ ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ನೀರಾವರಿಗೆ ಅತ್ಯಂತ ಉಪಯುಕ್ತ ಜಲಮೂಲವಾದ ವರದಾ-ಬೇಡ್ತಿ ನದಿ ಜೋಡಣೆ ರೈತರ ಅತ್ಯಂತ ಆಶಾದಾಯಕ ಯೋಜನೆಯಾಗಿದೆ. ಸದ್ಯ ನದಿಯ ನೀರು ಅನುಪಯುಕ್ತವಾಗಿ ಸಮುದ್ರ ಸೇರುತ್ತಿದೆ. ಅದನ್ನು ಕೃಷಿ ಹಾಗೂ ಕುಡಿಯುವ ನೀರಿಗಾಗಿ ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆಯ ಶಿಫಾರಸಿನಂತೆ ಭಾರತದ ಮಹಾತ್ವಾಕಾಂಕ್ಷಿ 30 ನದಿ ಜೋಡಣೆ ಯೋಜನೆಯಲ್ಲಿ ವರದಾ- ಬೇಡ್ತಿ ಅತ್ಯಂತ ಪ್ರಮುಖ ನದಿ ಜೋಡಣೆಯಾಗಿದೆ. 2021ರ ಮುಂಗಡ ಪತ್ರದಲ್ಲಿ ರಾಜ್ಯ ಸರ್ಕಾರ ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ಸೂಚಿಸಿತ್ತು. ಅದರಂತೆ ಜಲ ಸಂಪನ್ಮೂಲ ಇಲಾಖೆಗೆ ವರದಿಯೂ ಸಲ್ಲಿಕೆಯಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸುವ ಅಗತ್ಯವಿದೆ. ಕೇಂದ್ರಕ್ಕೆ ರಾಜ್ಯದ ಪರವಾಗಿ ಪ್ರಮಾಣಪತ್ರ, ಒಪ್ಪಿಗೆ ಪತ್ರ ಸಲ್ಲಿಸುವ ಅಗತ್ಯವಿದೆ. ಈಗಾಗಲೇ ರೈತರು, ಮಠಾಧೀಶರು, ಜನಪ್ರತಿನಿಧಿಗಳು, ಪ್ರಗತಿಪರ ಚಿಂತಕರು ಈ ಯೋಜನೆ ಸಾಕಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೀಘ್ರ ಮುಂದಾಗಬೇಕು ಎಂದು ಮನವಿ ಸಲ್ಲಿಸಿವೆ. ರಾಜ್ಯ ಸರ್ಕಾರ ಕೂಡಲೇ ಈ ಯೋಜನೆಯ ಸಾಕಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ ಮಕರವಳ್ಳಿ, ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸದಾನಂದಗೌಡ ಪಾಟೀಲ, ಮಂಜುನಾಥ ಕರಬುಳ್ಳೇರ ಇದ್ದರು.